ಕೂಡಿಗೆ, ಮಾ. 21: ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಸ್ವಯಂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಶಿಬಿರಕ್ಕೆ ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್ ಚಾಲನೆ ನೀಡಿ ಮಾತನಾಡಿ, ರಕ್ತದಾನ ಮಾಡುವ ಮುಖೇನ ಇನ್ನೊಂದು ಪ್ರಾಣವನ್ನು ಉಳಿಸಲು ಸಾಧ್ಯ. ಮನುಷ್ಯನ ಜೀವನಕ್ಕೆ ಅತಿ ಮುಖ್ಯವೆನಿಸಿರುವ ರಕ್ತದಾನ ಶ್ರೇಷ್ಠ ಎಂದರು. ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಡಾ. ರವಿಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕೂಡಿಗೆ ಟಾಟಾ ಕಾಫಿ ವಕ್ರ್ಸ್ ವ್ಯವಸ್ಥಾಪಕ ಭೀಮಯ್ಯ, ಮಡಿಕೇರಿ ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್‍ನ ಆಡಳಿತ ವೈದ್ಯಾಧಿಕಾರಿ ಡಾ. ಕರುಂಬಯ್ಯ, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್ ಇದ್ದರು. ಟಾಟಾ ಕಾಫಿ ಸಂಸ್ಥೆ, ಎಸ್‍ಎಲ್‍ಎನ್ ಕಾಫಿ ಸಂಸ್ಥೆ, ಡೈರಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ 60 ಮಂದಿ ರಕ್ತದಾನ ಮಾಡಿದರು.