ಮರಗೋಡು, ಮಾ. 21: ಪ್ರವಾಹಗಳು ಎದುರಾದರೂ ದೊಡ್ಡ ಬಂಡೆಗಳು ಕೊಚ್ಚಿಕೊಂಡು ಹೋಗದೆ ಸ್ಥಿರವಾಗಿ ನಿಂತಿರುವಂತೆ ಕನ್ನಡ ಭಾಷೆಯು ಕೂಡಾ ಈಗ ಎದುರಾಗುತ್ತಿರುವ ಅನ್ಯ ಭಾಷೆಗಳೆಂಬ ಪ್ರವಾಹಕ್ಕೆ ಎದುರಾಗಿ ಸ್ಥಿರವಾಗಿ ನಿಲ್ಲಲಿದೆ ಎಂದು ಮರಗೋಡು ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಕನ್ನಡ ಶಿಕ್ಷಕ ಪಿ.ಎಸ್. ರವಿಕೃಷ್ಣ ಅಭಿಪ್ರಾಯ ಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಮೂರ್ನಾಡು ಹೋಬಳಿ ವತಿಯಿಂದ ಮರಗೋಡು ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ಎನ್. ಮಹಾಬಲೇಶ್ವರ ಭಟ್ ದತ್ತಿನಿಧಿ ಉಪನ್ಯಾಸ ಹಾಗೂ ಕನ್ನಡ ಸಾಹಿತ್ಯ ಪರಿಷತ್‍ನಿಂದ ಶಾಲೆಗೆ ಉಚಿತ ಪುಸ್ತಕಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ‘ಕನ್ನಡದ ಏಳು-ಬೀಳು’ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕ.ಸಾ. ಪರಿಷತ್ತು ಸ್ಥಳೀಯ ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಹುತೇಕ ಕೊಡಗಿನ ಸಾಹಿತಿಗಳಿಂದ ರಚಿತವಾದ ಕೃತಿಗಳನ್ನು ವಿದ್ಯಾಸಂಸ್ಥೆಗಳಿಗೆ ಉಚಿತವಾಗಿ ನೀಡುವ ಯೋಜನೆ ಹಾಕಿಕೊಂಡಿದೆ. ಆ ಮೂಲಕ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭ ಅವರು ಮರಗೋಡಿನ ಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ. ವಾಸಯ್ಯ ಅವರಿಗೆ ಉಚಿತ ಕೃತಿಗಳನ್ನು ಹಸ್ತಾಂತರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಎಂ.ಪಿ. ವೀಣಾ ಕಾರ್ಯಕ್ರಮ ಉದ್ಘಾಟಿಸಿದರು. ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಪಿ. ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ವೆಂಕಟೇಶ್ ನಾಯಕ್ ಸ್ವಾಗತಿಸಿ, ಬಿ.ಬಿ. ಪೂರ್ಣಿಮಾ ನಿರೂಪಿಸಿ, ವಂದಿಸಿದರು.