ಕುಶಾಲನಗರ, ಮಾ. 21: ಕಾವೇರಿ ನದಿ ನೀರಿನ ಹರಿವು ಕ್ಷೀಣಗೊಳ್ಳುವದರೊಂದಿಗೆ ನೀರಿನ ಗುಣಮಟ್ಟ ಏರುಪೇರಾಗುತ್ತಿರುವ ಹಿನ್ನೆಲೆ ಅಪಾಯದ ಅಂಚಿನಲ್ಲಿರುವ ಅಪರೂಪದ ಮಹಶೀರ್ ಸೇರಿದಂತೆ ಜಲಚರಗಳನ್ನು ಸ್ಥಳಾಂತರಿಸಲು ಮೀನುಗಾರಿಕೆ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ಕೈಗೊಂಡಿದೆ.
ಕುಶಾಲನಗರ ಸಮೀಪ ಕಾವೇರಿ ನಿಸರ್ಗಧಾಮ ತೂಗುಸೇತುವೆ ಕೆಳಭಾಗದಲ್ಲಿ ಟನ್‍ಗಟ್ಟಲೆ ಪ್ರಮಾಣದ ಮಹಶೀರ್ ಮೀನು ಸೇರಿದಂತೆ ಸಾಮಾನ್ಯ ಮೀನುಗಳಿದ್ದು ಕಲುಷಿತಗೊಂಡ ನೀರಿನಲ್ಲಿ ಆಮ್ಲಜನಕದ ಕೊರತೆಯಿಂದ ಹಲವು ಮೀನುಗಳು ಸತ್ತು ತೇಲುತ್ತಿರುವ ದೃಶ್ಯ ವರದಿಯಾಗಿತ್ತು. ಈ ಹಿನ್ನೆಲೆ ಮೀನುಗಾರಿಕಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಕೆ.ಟಿ. ದರ್ಶನ್ ನೇತೃತ್ವದಲ್ಲಿ ಮೀನುಗಳ ಸ್ಥಳಾಂತರ ಕಾರ್ಯಾಚರಣೆ ಪ್ರಾರಂಭಗೊಂಡಿದೆ.
ಅರಣ್ಯ ಇಲಾಖೆ ಸಹಯೋಗ ದೊಂದಿಗೆ ಕಾವೇರಿ ಮೀನುಗಾರರ ಸಂಘದ ಬೆಸ್ತರನ್ನು ಬಳಸಿ ನೂರಾರು ಮೀನುಗಳನ್ನು ಹಿಡಿದು ಹಾರಂಗಿ ಜಲಾಶಯ, ಮೀನು ಮರಿ ಪಾಲನಾ ಕೇಂದ್ರ ಹಾಗೂ ಹಾರಂಗಿ ಮತ್ಸ್ಯಧಾಮಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಸ್ಥಳದಲ್ಲಿದ್ದ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಮಿಲನ ಭರತ್ ತಿಳಿಸಿದ್ದಾರೆ.
ಮಡಿಕೇರಿ, ಸೋಮವಾರಪೇಟೆ ಹಾಗೂ ಹಾರಂಗಿ ವ್ಯಾಪ್ತಿಯ ಇಲಾಖಾ ಅಧಿಕಾರಿ ಸಿಬ್ಬಂದಿಗಳು ಸೋಮವಾರ ಬೆಳಗಿನಿಂದ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಂದಾಜು 8 ರಿಂದ 15 ಕೆ.ಜಿ. ತೂಕದ ಮೀನುಗಳು ನದಿಯಲ್ಲಿದ್ದು ಬಹುತೇಕ ಮೀನುಗಳನ್ನು ಸ್ಥಳಾಂತರಿಸಲು ಇಲಾಖೆ ಸಿಬ್ಬಂದಿಗಳು ತೊಡಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
15 ಕ್ಕೂ ಅಧಿಕ ಸಿಬ್ಬಂದಿಗಳು ತೆಪ್ಪ ಹಾಗೂ ಪೆಡಲ್ ಬೋಟ್‍ಗಳನ್ನು ಬಳಸಿಕೊಂಡು ಮೀನುಗಳನ್ನು ಹಿಡಿದು ನೀರಿನ ಟ್ಯಾಂಕಿನಲ್ಲಿ ತುಂಬಿ ಕಳುಹಿಸುತ್ತಿರುವ ದೃಶ್ಯ ಗೋಚರಿಸಿದೆ. ಮೀನುಗಾರಿಕಾ ಇಲಾಖೆಯ ಹಾರಂಗಿ ಘಟಕದ ಸಹಾಯಕ ನಿರ್ದೇಶಕರಾದ ಎಸ್.ಎಂ. ಸಚಿನ್, ಗಿರೀಶ್, ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ವಿಕಾಸ್ ಮತ್ತಿತರರು ಇದ್ದರು.