ಗೋಣಿಕೊಪ್ಪ ವರದಿ, ಮಾ. 21: ತೋಟಗಾರಿಕಾ ಬೆಳೆಗಳೊಂದಿಗೆ ಭವಿಷ್ಯದಲ್ಲಿ ರೈತನಿಗೆ ಆರ್ಥಿಕವಾಗಿ ಲಾಭ ತಂದುಕೊಡಬಲ್ಲ ಮರಗಳನ್ನು ರೈತನಿಗೆ ಪರಿಚಯಿಸಲು ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಶಿರಸಿ ಅರಣ್ಯ ಮಹಾವಿದ್ಯಾಲಯದ ಡೀನ್ ಎಸ್.ಕೆ. ಗಾಳಿ ಹೇಳಿದರು.

ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಭವಿಷ್ಯದ ಸುಸ್ಥಿರತೆಗಾಗಿ ಮರಗಳ ಸಂರಕ್ಷಣೆ, ನಿರ್ವಹಣೆ ಮತ್ತು ಬಳಕೆಯಲ್ಲಿ ಇತ್ತೀಚಿನ ಆವಿಷ್ಕಾರಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರು ತೋಟಗಾರಿಕಾ ಬೆಳೆಯೊಂದಿಗೆ ಮರಗಳನ್ನು ಬೆಳೆಸಲು ಇಳುವರಿ ಕುಂಠಿತಗೊಳ್ಳುವ ದೃಷ್ಟಿಯಿಂದ ಪ್ರೋತ್ಸಾಹ ನೀಡುತ್ತಿಲ್ಲ ಎಂದು ಹೇಳಿದರು.

ತಮಿಳುನಾಡು ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಪಾರ್ಥೀಬನ್ ಸುಸ್ಥಿರ ಭವಿಷ್ಯಕ್ಕಾಗಿ ಅರಣ್ಯ ಸಂಪತ್ತಿನ ವಿಷಯದಲ್ಲಿ ಕೈಗೊಳ್ಳಬೇಕಾದ ಸಂಶೋಧನೆಗಳು ಎಂಬ ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆಯುವ ದಿಕ್ಕಿನಲ್ಲಿ ಮಾತ್ರ ಯೋಚಿಸಬಾರದು. ಅರಣ್ಯ ಸಂರಕ್ಷಣೆ ಕೂಡ ವಿದ್ಯಾರ್ಥಿಗಳ ಜವಾಬ್ದಾರಿ ಯಾಗಬೇಕು ಎಂದು ಹೇಳಿದರು.

ಡಾ. ರಾಮಕೃಷ್ಣ ಹೆಗಡೆ ಮಾತನಾಡಿ, ಪ್ರಾಕೃತಿಕ ವಿಕೋಪ ಹೆಚ್ಚಾಗಲು ವನ್ಯ ಸಂಪತ್ತಿನ ಅತಿಯಾದ ಬಳಕೆ ಕಾರಣ ಎಂದರು. ಅರಣ್ಯ ಮಹಾವಿದ್ಯಾಲಯದ ಆವರಣದಲ್ಲಿ ಗಿಡ ನೆಡುವ ಮೂಲಕ ಅತಿಥಿಗಳು ಸಮ್ಮೇಳನಕ್ಕೆ ಚಾಲನೆ ನೀಡಿದರು.

ಮರ ಸಂಪನ್ಮೂಲಗಳ ಸಂರಕ್ಷಣೆ-ನಿರ್ವಹಣೆ ಕುರಿತ ಪುಸ್ತಕವನ್ನು ಶಿರಸಿ ಅರಣ್ಯ ಮಹಾವಿದ್ಯಾಲಯದ ಡೀನ್ ಎಸ್.ಕೆ. ಗಾಳಿ ಬಿಡುಗಡೆಗೊಳಿಸಿದರು.

ಸಮ್ಮೇಳನದಲ್ಲಿ ದೇಶದ ವಿವಿಧ ಅರಣ್ಯ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು, ತಂತ್ರಜ್ಞರು ಹಾಗೂ ವಿಜ್ಞಾನಿಗಳು ಪಾಲ್ಗೊಂಡರು.