ಸಿದ್ದಾಪುರ, ಮಾ. 21: ಕಾಡಾನೆ ಹಾವಳಿಯ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗ ಳೊಂದಿಗೆ ಚರ್ಚಿಸಿ ಸಹಕಾರ ನೀಡುವದಾಗಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಭರವಸೆ ನೀಡಿದ್ದಾರೆ.

ಜಿಲ್ಲಾ ರೈತರ ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯಿಂದ ಮಡಿಕೇರಿಯ ಅರಣ್ಯ ಭವನದಲ್ಲಿ ಸಿ.ಸಿ.ಎಫ್. ಲಿಂಗರಾಜು ಗೈರು ಹಾಜರಿಯಲ್ಲಿ ಮಡಿಕೇರಿ ಡಿ.ಸಿ.ಎಫ್. ಮಂಜುನಾಥ್ ಸಮ್ಮುಖದಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸುವ ಬಗ್ಗೆ ಸಭೆ ನಡೆಸಲಾಗಿತ್ತು. ಸಭೆಯ ಬಳಿಕ ಸಮಿತಿಯ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರನ್ನು ಭೇಟಿ ಮಾಡಿ ಚರ್ಚಿಸಿ ಸಭೆಗೆ ಗೈರು ಹಾಜರಾದ ಲಿಂಗರಾಜು ನಿರ್ಲಕ್ಷ್ಯ ಬಗ್ಗೆ ಹಾಗೂ ಕಾಡಾನೆ ಧಾಳಿಯಿಂದಾಗಿ ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಪ್ರಾಣಹಾನಿಯ ಬಗ್ಗೆ ಗಮನ ಸೆಳೆಯಲಾಯಿತು.

ಈ ಸಂದರ್ಭ ಸಮಿತಿಯ ಕಾನೂನು ಸಲಹೆಗಾರ ಹಾಗೂ ವಕೀಲ ಕೆ.ಬಿ. ಹೇಮಚಂದ್ರ ಮಾತನಾಡಿ, ಫೆ. 23 ರಂದು ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸಿದ ಸಂದರ್ಭ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಅವರಿಗೆ 20 ಅಂಶಗಳ ಬೇಡಿಕೆಯ ಮನವಿ ಪತ್ರವನ್ನು ನೀಡಲಾಯಿತು. ಮನವಿಗೆ ಈವರೆಗೂ ಸಿ.ಸಿ.ಎಫ್. ಯಾವದೇ ರೀತಿ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ದೂರಿದರು.

ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಹಾಗೂ ಸಮಿತಿಯ ಮುಖಂಡ ಸಂಕೇತ್ ಪೂವಯ್ಯ ಮಾತನಾಡಿ, ಕಾಡಾನೆ ಧಾಳಿಯಿಂದಾಗಿ ಸಿದ್ದಾಪುರ ಸುತ್ತಮುತ್ತಲು ಸೇರಿದಂತೆ ಜಿಲ್ಲೆಯ ವಿವಿಧೆಡೆ 43 ಮಂದಿ ಸಾವನ್ನಾಪ್ಪಿದ್ದಾರೆ. ನೂರಾರು ಮಂದಿ ಅಂಗವೈಫಲ್ಯದಿಂದ ಬಳಲುತ್ತಿದ್ದರೂ ಅರಣ್ಯ ಇಲಾಖೆ ಬಡವರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಮಾತನಾಡಿ, ಸಿ.ಸಿ.ಎಫ್. ಸಭೆ ಕರೆದು ತಮಗೆ ಯಾವದೇ ಮಾಹಿತಿ ನೀಡದೇ ಗೈರು ಹಾಜರಾಗಿದ್ದಾರೆ ಎಂದು ದೂರಿದರು.

ಜಿಲ್ಲಾಧಿಕಾರಿಗಳ ಭೇಟಿ ಬಳಿಕ

ಡಿ.ಸಿ. ಕಚೇರಿಗೆ ತೆರಳಿದ ಹೋರಾಟ ಸಮಿತಿಯ ಪದಾಧಿಕಾರಿಗಳು ಸಿ.ಸಿ.ಎಫ್. ಗೈರು ಹಾಜರಾಗಿರುವ ವಿಚಾರವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭ ಜಿಲ್ಲಾ ರೈತರ ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಉಪಾಧ್ಯಕ್ಷ ಕೆ.ಎನ್. ಕುಶಾಲಪ್ಪ ಮಾತನಾಡಿ, ಕಾಡಾನೆ ಸಮಸ್ಯೆ ಬಗ್ಗೆ ಗಮನ ಸೆಳೆದರು.

ಜಿಲ್ಲಾಧಿಕಾರಿ ಶ್ರೀವಿದ್ಯಾ ಪ್ರತಿಕ್ರಿಯಿಸಿ ಕಳೆದ 3 ವರ್ಷಗಳ ಹಿಂದೆ ಕಾಡಾನೆ ಧಾಳಿಗೆ ಸಿಲುಕಿ ಅಂಗವೈಫಲ್ಯದಿಂದ ಬಳಲುತ್ತಿರುವ ಬಾಡಗ-ಬಾಣಂಗಾಲ ಗ್ರಾಮದ ನಿವಾಸಿ ಲಕ್ಷ್ಮಿ ಅವರಿಗೆ ಇವರೆಗೂ ಯಾಕೆ ಪರಿಹಾರ ನೀಡಿಲ್ಲವೆಂದು ವೀರಾಜಪೇಟೆ ತಾಲೂಕು ಡಿ.ಸಿ.ಎಫ್. ಮರಿಯಾ ಕ್ರಿಷ್ಟಿರಾಜ್ ಅವರಿಗೆ ದೂರವಾಣಿ ಕರೆ ಮಾಡಿ ಪ್ರಶ್ನಿಸಿದರು. ಅಲ್ಲದೇ ಡಿ.ಸಿ.ಎಫ್. ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಕಾಡಾನೆ ಧಾಳಿಗೆ ಸಿಲುಕಿ ಅಂಗವೈಫಲ್ಯದಿಂದ ಬಳಲುತ್ತಿರುವ 19 ಮಂದಿಯ ಮಾಹಿತಿಗಳ ವಿವರಗಳನ್ನು ತನಗೆ ನೀಡುವಂತೆ ಡಿ.ಸಿ. ಸಮಿತಿಯ ಪದಾಧಿಕಾರಿಗಳಿಗೆ ತಿಳಿಸಿದರು. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಸಭೆ ನಡೆಸಲು ಪ್ರಯತ್ನಿಸಲಾಗುವದೆಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾ ರೈತರ ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಮಂಡೇಪಂಡ ಪ್ರವೀಣ್ ಬೋಪಯ್ಯ, ಕಂಬೀರಂಡ ನಂದಾ ಗಣಪತಿ, ಪಾಂಡಂಡ ರಾಜ ಗಣಪತಿ, ರಾಯ್ ಕರುಂಬಯ್ಯ, ಚೆಪ್ಪುಡೀರ ಸತೀಶ್, ರಾಜ್ಯ ರೈತ ಸಂಘದ ಮುಖಂಡರುಗಳಾದ ಚಿಮ್ಮಂಗಡ ಗಣೇಶ್, ಸುಜಯ್ ಬೋಪಯ್ಯ, ಚೋನಿರ ಸತ್ಯ, ಅಯ್ಯಮಡ ಹ್ಯಾರಿ, ಬಾಚಮಂಡ ನಂಜಪ್ಪ, ತೀತಿರಮಾಡ ಸುನೀಲ್, ಇನ್ನಿತರರು ಹಾಜರಿದ್ದರು.

- ವಾಸು