ಸೋಮವಾರಪೇಟೆ,ಮಾ.20: ಬೇಳೂರು ಗ್ರಾಮ ಪಂಚಾಯಿತಿಯ ಬಜೆಗುಂಡಿ ಗ್ರಾಮದಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ ಕೈಗೊಳ್ಳಲಾದ ರಸ್ತೆ ಕಾಮಗಾರಿ ಉದ್ಘಾಟನೆ ಸಂದರ್ಭ ಬಿಜೆಪಿ ಪಕ್ಷದ ಬಾವುಟಗಳನ್ನು ಬಳಸಲಾಗಿದೆ. ಇದರೊಂದಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಮಾಹಿತಿ ಕಾರ್ಯಕ್ರಮದಲ್ಲೂ ಬಿಜೆಪಿ ಧ್ವಜ ಅಳವಡಿಸಲಾಗಿದೆ ಎಂದು ಆರೋಪಿಸಿರುವ ಬೇಳೂರು ಗ್ರಾ.ಪಂ. ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗ್ರಾ.ಪಂ. ಸದಸ್ಯ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಮುಖ್ಯಮಂತ್ರಿಗಳ ವಿಶೇಷ ಆಸಕ್ತಿಯಡಿ ಬಜೆಗುಂಡಿ ಗ್ರಾಮಕ್ಕೆ 22ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಕೈಗೊಂಡ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಶಾಸಕ ಅಪ್ಪಚ್ಚು ರಂಜನ್ ಅವರು ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿ ಉದ್ಘಾಟಿಸಿದ್ದಾರೆ ಎಂದರು.
ಈ ಹಿಂದೆ ವೀಣಾ ಅಚ್ಚಯ್ಯ ಅವರು ಕಾಮಗಾರಿಗೆ ಚಾಲನೆ ನೀಡುವ ಸಂದರ್ಭ ತಮ್ಮನ್ನು ಆಹ್ವಾನಿಸಿಲ್ಲ ಎಂದು ಇದೇ ಶಾಸಕರು ವಿಧಾನ ಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿದ್ದರು. ಇದೀಗ ಸ್ಥಳೀಯ ಜನಪ್ರತಿನಿಧಿಗಳು, ವಿಧಾನಪರಿಷತ್ ಸದಸ್ಯರನ್ನು ಕರೆಯದೇ ರಸ್ತೆ ಕಾಮಗಾರಿ ಉದ್ಘಾಟಿಸಿದ್ದಾರೆ. ಕನಿಷ್ಟ ಪಕ್ಷ ಗ್ರಾ.ಪಂ. ಅಧ್ಯಕ್ಷರಿಗೂ ಆಹ್ವಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಅನುದಾನದಲ್ಲಿ ಕೈಗೊಂಡ ರಸ್ತೆಯನ್ನು ಉದ್ಘಾಟಿಸುವ ಸಂದರ್ಭ ಬಿಜೆಪಿ ಬಾವುಟಗಳನ್ನು ರಸ್ತೆಯ ಎರಡೂ ಬದಿ ಕಟ್ಟಲಾಗಿದೆ. ನಂತರ ಸಮುದಾಯ ಭವನದಲ್ಲಿ ಪಕ್ಷದ ಬಾವುಟ ಅಳವಡಿಸಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವಿತರಣೆ ಮತ್ತು ಮಾಹಿತಿ ಕಾರ್ಯಾಗಾರವನ್ನು ನಡೆಸಲಾಗಿದೆ. ಸರ್ಕಾರದ ಹಣವನ್ನು ಸಾಲವಾಗಿ ನೀಡುವ ಕಾರ್ಯಕ್ರಮಕ್ಕೆ ಪಕ್ಷದ ಬಾವುಟ ಅಳವಡಿಸಿದ್ದು ಸರಿಯಲ್ಲ. ಡಿಸಿಸಿ ಬ್ಯಾಂಕ್ ಅಧಿಕಾರಿಗಳೂ ಸಹ ಇದರಲ್ಲಿ ಭಾಗಿಯಾಗಿರುವದು ಖಂಡನೀಯ ಎಂದರು. ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷ ರಾಜಕೀಯ ಮಾಡಿದರೆ ಮುಂದಿನ ದಿನಗಳಲ್ಲಿ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲಾಗುವದು ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರದಿಂದ ಸೋಮವಾರಪೇಟೆ ವ್ಯಾಪ್ತಿಗೆ 200 ಕೋಟಿಗೂ ಅಧಿಕ ಅನುದಾನ ಬಂದಿದ್ದರೂ ಬಿಜೆಪಿಯವರು ಅನುದಾನವೇ ಬಂದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಗೋಷ್ಠಿಯಲ್ಲಿದ್ದ ತಾ.ಪಂ. ಸದಸ್ಯ ಬಿ.ಬಿ. ಸತೀಶ್ ದೂರಿದರು. ಗೋಷ್ಠಿಯಲ್ಲಿ ಬೇಳೂರು ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್, ಸದಸ್ಯೆ ವೀಣಾ ರಮೇಶ್, ಪ.ಪಂ. ನಾಮನಿರ್ದೇಶಿತ ಸದಸ್ಯ ಉದಯಶಂಕರ್ ಉಪಸ್ಥಿತರಿದ್ದರು.