ಮಡಿಕೇರಿ, ಮಾ.20 : ಕ್ರೈಸ್ತ ಅಭಿವೃದ್ಧಿ ಮಂಡಳಿಗೆ ಬದಲಾಗಿ ಕ್ರೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆಯ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಿಸುವ ಮತ್ತು ಅದನ್ನು ಸಮರ್ಪಕವಾಗಿ ಜಾರಿಗೆ ತರುವ ಬಗ್ಗೆ ಭರವಸೆ ನೀಡುವ ರಾಜಕೀಯ ಪಕ್ಷಕ್ಕೆ ಈ ಬಾರಿ ಮತದಾನ ಮಾಡುವದಾಗಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಘೋಷಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಪಿ.ವಿ. ಜಾನ್ಸನ್, ರಾಜ್ಯದಲ್ಲಿ ಸುಮಾರು 30 ರಿಂದ 35 ಲಕ್ಷ ಕ್ರೈಸ್ತ ಜನಾಂಗ ದವರಿದ್ದು, ಮುಂಬರುವ ಸರ್ಕಾರ ಪ್ರತ್ಯೇಕ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಅಗತ್ಯವಿದೆಯೆಂದರು. ಕೊಡಗು ಜಿಲ್ಲೆಯಲ್ಲಿ ಸುಮಾರು 25 ರಿಂದ 30 ಸಾವಿರ ಕ್ರೈಸ್ತ ಬಾಂಧವರಿದ್ದು, ಪ್ರತಿ ಚುನಾವಣೆಯಲ್ಲಿ ಶೇ.95ಕ್ಕಿಂತ ಅಧಿಕ ಮತದಾನವನ್ನು ಮಾಡುತ್ತಿದ್ದಾರೆ. ಈ ಮೂಲಕ ಸರ್ಕಾರ ರಚನೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಆದರೆ, ರಾಜಕೀಯ ಪಕ್ಷಗಳು ಕ್ರೈಸ್ತರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ನಮ್ಮನ್ನು ನೆನಪಿಸಿಕೊಳ್ಳುವ ರಾಜಕಾರಣಿಗಳು ನಂತರ ಕಡೆಗಣಿಸುತ್ತಿದ್ದಾರೆ ಎಂದು ಜಾನ್ಸನ್ ಆರೋಪಿಸಿದರು.

ಈ ಬಾರಿ ರಾಜಕೀಯ ರಹಿತವಾಗಿ ಕ್ರೈಸ್ತರು ಒಗ್ಗೂಡಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಆಯಾ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳಿಗೆ ನೀಡಲಾಗುತ್ತಿದೆ. ಬೇಡಿಕೆಯ ಬಗ್ಗೆ ತಮ್ಮ ತಮ್ಮ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿ ಸೂಕ್ತ ಭರವಸೆ ನೀಡುವ ಪಕ್ಷಗಳಿಗೆ ಮತ ನೀಡುವದಾಗಿ ತಿಳಿಸಿದರು.

ಕ್ರೈಸ್ತರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಟ್ಟರು ಸರ್ಕಾರದ ಅನುದಾನ ಕ್ರೈಸ್ತರ ಅಭ್ಯುದಯಕ್ಕೆ ವಿನಿಯೋಗವಾಗುತ್ತಿಲ್ಲ ವೆಂದು ಜಾನ್ಸನ್ ಬೇಸರ ವ್ಯಕ್ತಪಡಿಸಿದರು.

ಸಂಘÀದ ಜಿಲ್ಲಾ ಸಂಚಾಲಕ ಜೋಕಿಂ ರಾಡ್ರಿಗಸ್ ಮಾತನಾಡಿ, ಪ್ರತ್ಯೇಕ ಕ್ರೈಸ್ತ ಅಭಿವೃದ್ಧಿ ನಿಗಮನವನ್ನು ಸ್ಥಾಪಿಸದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟವನ್ನು ಕೈಗೆತ್ತಿಕೊಳ್ಳ ಲಾಗುವದು. ಇದಕ್ಕೆ ರಾಜ್ಯದ ಕ್ರೈಸ್ತ ಗುರುಗಳ ಬೆಂಬಲವಿದೆಯೆಂದು ತಿಳಿಸಿದರು.

ಬೇಡಿಕೆಗಳು : ಕ್ರೈಸ್ತ ಅಭಿವೃದ್ಧಿ ಮಂಡಳಿಗೆ ಬದಲಾಗಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಗ್ರಾ.ಪಂ ಮೂಲಕ ನೀಡುವ ವಸತಿ ಹಾಗೂ ನಿವೇಶನ ಯೋಜನೆಯ ಲಾಭವನ್ನು ಕ್ರೈಸ್ತರಿಗೆ ಅನುಪಾತದ ಆಧಾರದಲ್ಲಿ ವಿತರಿಸಬೇಕು, ಜಿ.ಪಂ ತಾಪಂ ಚುನಾವಣೆಯಲ್ಲಿ ಕ್ರೈಸ್ತರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು, ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶನ ಮಾಡುವ ಸಂದರ್ಭ ಸರ್ಕಾರ ಕ್ರೈಸ್ತರನ್ನು ಪರಿಗಣಿಸಬೇಕು, ಕ್ರೈಸ್ತರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲು ರಾಜ್ಯದಲ್ಲಿ ಅಧ್ಯಯನ ಸಮಿತಿಯನ್ನು ರಚಿಸಬೇಕು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಸ್ಯಾಂ ಜೋಸೆಫ್, ಖಜಾಂಚಿ ಐ.ಟಿ. ರಾಯ್, ಪ್ರಧಾನ ಕಾರ್ಯದರ್ಶಿ ಜಾನ್ಸನ್ ಪಿಂಟೋ ಹಾಗೂ ಉಪಾಧ್ಯಕ್ಷ ಡೆನ್ನಿ ಬರೋಸ್ ಉಪಸ್ಥಿತರಿದ್ದರು.