ಮಾನ್ಯರೆ, ಜನರನ್ನು ಮರುಳು ಮಾಡುವ ಯಾತ್ರೆ ಬಿಟ್ಟು ಸಂಕಷ್ಟದಲ್ಲಿರುವ ಬೆಳೆಗಾರರ ಜೀವನ ಭದ್ರತೆಗೆ ಸಂಸದ ಪ್ರತಾಪ್ ಸಿಂಹ ಯಾತ್ರೆ ಕೈಗೊಳ್ಳಲಿ.
ಉತ್ಪಾದನಾ ವೆಚ್ಚ ಹೆಚ್ಚಳದಿಂದ ತೀವ್ರ ಸಂಕಷ್ಟದಲ್ಲಿರುವ ಜಿಲ್ಲೆಯ ಬೆಳೆಗಾರರಿಗೆ ಇದೀಗ ಕರಿಮೆಣಸು-ಕಾಫಿ ದರ ಕುಸಿತ, ಫಸಲು ಕುಂಠಿತದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಸಂಸದ ಪ್ರತಾಪ್ ಸಿಂಹ ಅವರು ಸ್ವ ಕ್ಷೇತ್ರ ಕೊಡಗು ಜಿಲ್ಲೆಯ ಜನರ ಜೀವನ ಭದ್ರತೆಗಾಗಿ ಕೇಂದ್ರ ಸರಕಾರದ ಗಮನ ಸೆಳೆದು ಸಮಸ್ಯೆ ಪರಿಹರಿಸಲು ಯಾತ್ರೆ ಕೈಗೊಳ್ಳಲಿ. ವಿಯೆಟ್ನಾಂ ದೇಶದಿಂದ ಕಳಪೆ ಗುಣಮಟ್ಟದ ಕರಿಮೆಣಸು ಭಾರತಕ್ಕೆ ಕಡಿಮೆ ದರದಲ್ಲಿ ಆಮದಾಗುತ್ತಿರುವ ಪರಿಣಾಮ, ಉತ್ತಮ ಗುಣಮಟ್ಟದ ದೇಶೀಯ ಕರಿಮೆಣಸು ದರ ಕೆ.ಜಿ. ಗೆ ರೂ. 730 ಇದ್ದ ದರ ರೂ 330 ಕ್ಕೆ ಕುಸಿದಿದೆ. ಕಳೆದ 5 ತಿಂಗಳ ಹಿಂದೆ ವಿಯೆಟ್ನಾಂ ಕರಿಮೆಣಸು ಆಮದಿನಿಂದ ಕಂಗಾಲಾದ ಬೆಳೆಗಾರರು ಪ್ರತಿಭಟನೆ ನಡೆಸಿದ ಸಂದರ್ಭ ಸಂಸದ ಪ್ರತಾಪ್ ಸಿಂಹ ಅವರು ದರ ಕುಸಿತದಿಂದ ಆತಂಕಗೊಂಡು ಬೆಳೆಗಾರರು ದುಡುಕಿ ಕಡಿಮೆ ಬೆಲೆಗೆ ಕರಿಮೆಣಸು ಮಾರಾಟ ಮಾಡಬೇಡಿ, ಜಿಲ್ಲೆಯ ಬೆಳೆಗಾರರ ನಿಯೋಗ ಸಹಿತ ಕೇಂದ್ರ ಸರಕಾರಕ್ಕೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವವರೆಗೆ ಕರಿಮೆಣಸು ದಾಸ್ತ್ತಾನು ಇರಿಸಿಕೊಂಡು ಉತ್ತಮಬೆಲೆ ಬರುವವರೆಗೆ ದಾಸ್ತ್ತಾನು ಇರಿಸಿಕೊಳ್ಳುವಂತೆ ಸಲಹೆ ನೀಡಿದರು. ಆದರೆ ಈ ನಿಟ್ಟಿನಲ್ಲಿ ಸಂಸದರು ಯಾವುದೇ ಪ್ರಯತ್ನ ಮಾಡಿಲ್ಲ. ಕರಿಮೆಣಸು ಬೆಳೆಗಾರರು ಸಂಸದರ ಭರವಸೆಯಂತೆ ದರ ಏರಿಕೆಯಾಗುವ ನಿರೀಕ್ಷೆಯಲ್ಲಿ ತಮ್ಮ ದಾಸ್ತಾನು ಇರಿಸಿಕೊಂಡು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಜಿಲ್ಲೆಯಲ್ಲಿ ಕರಿಮೆಣಸು- ಕಾಫಿ ದರ ಕುಸಿತ ಇನ್ನೊಂದೆಡೆ ಎರಡು ಬೆಳೆಗಳ ಫಸಲು ಕುಂಠಿತದಿಂದ ತೀವ್ರ ಸಂಕಷ್ಟವನ್ನು ಬೆಳೆಗಾರ ಎದುರಿಸುವಂತಾಗಿದೆ. ಬ್ಯಾಂಕಿನವರು ಸಾಲ ಕಟ್ಟುವಂತೆ ಒತ್ತ್ತಾಯಿಸುತ್ತಿದ್ದು, ಹಲವೆಡೆ ಸಾಲ ಮರುಪಾವತಿಗೆ ಬ್ಯಾಂಕುಗಳು ನ್ಯಾಯಾಲಯದಲ್ಲಿ ದಾವೆ ಹೂಡಿವೆ. ಇನ್ನೊಂದು ಕಡೆ ಪ್ರತಿನಿತ್ಯ ಬ್ಯಾಂಕ್ ಅಧಿಕಾರಿಗಳು ಮನೆಮನೆಗೆ ತೆರಳಿ ಸಾಲ ವಸೂಲಾತಿಗೆ ಕಿರುಕುಳ ನೀಡುತ್ತ ನೋಟೀಸು ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆ ಒಡ್ಡುತ್ತಿವೆ. ಸಂಸದ ಪ್ರತಾಪ್ ಸಿಂಹ ಅವರು ಈ ಬಗ್ಗೆ ಗಮನ ಹರಿಸಲಿ.
ಆದರೆ ಭಾರತ ಕೆಲವು ಆಮದು ಮತ್ತು ರಫ್ತು ಮಾಡಿಕೊಳ್ಳುವ ಉದ್ಯಮಿಗಳ ಲಾಭಿಗೆ ಮಣಿದು ಕಳಪೆ ಕರಿಮೆಣಸನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ದೇಶೀಯ ಕರಿಮೆಣಸು ಬೆಳೆಗಾರರ ಹಿತಕ್ಕೆ ಧಕ್ಕೆ ತಂದೊಡ್ಡಿದೆ. ಕೇಂದ್ರ ಸರಕಾರ ಕರಿಮೆಣಸಿಗೆ ಕನಿಷ್ಟ ಆಮದು ದರ ರೂ. 500. ನಿಗದಿಪಡಿಸಿದ್ದರೂ ಅದರ ಪ್ರಯೋಜನ ಬೆಳೆಗಾರರಿಗೆ ದೊರೆತಿಲ್ಲ.ಇದರ ಅನುಷ್ಠಾನದಲ್ಲಿ ವ್ಯಾಪಕ ದುರುಪಯೋಗ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ. ತೀವ್ರ ಸಂಕಷ್ಟದಲ್ಲಿರುವ ಬೆಳೆಗಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಗಮನಹರಿಸಲಿ.
-ಕೊಲ್ಲೀರ ಬೋಪಣ್ಣ, ಮಾಳೇಟಿರ ಬೋಪಣ್ಣ, ಕುಸುಮಾ ಜೋಯಪ್ಪ, ಎ.ಜೆ. ಬಾಬು- ಪೊನ್ನಂಪೇಟೆ.