ಮಡಿಕೇರಿ, ಮಾ. 20: ಇದೊಂದು ಅಪರೂಪದ ಸಮ್ಮಿಲನ. ಜಿಲ್ಲೆಯಲ್ಲಿ ಪ್ರಸ್ತುತ ವಿವಿಧೆಡೆಗಳಲ್ಲಿ ಹತ್ತು ಹಲವಾರು ಕ್ರೀಡಾಕೂಟಗಳು ಕಾರ್ಯಕ್ರಮ ನಡೆಯುತ್ತಿದ್ದು, ವಿವಿಧ ಜನಾಂಗಗಳು, ಸಂಘ-ಸಂಸ್ಥೆ, ಕ್ಲಬ್‍ಗಳ ಮೂಲಕ ಜನರು ಬೆರೆಯುತ್ತಾರೆ. ಆದರೆ ಇಲ್ಲಿದ್ದ ಎಲ್ಲರೂ ಅರವತ್ತು ವರ್ಷ ಮೇಲ್ಪಟ್ಟವರೇ...

ಯುವ ಜನಾಂಗದವರೊಂದಿಗೆ ತಾವೇನೂ ಕಡಿಮೆ ಇಲ್ಲ ಎಂಬಂತೆ ವಿವಿಧ ಕ್ರೀಡೆಗಳಲ್ಲಿಯೂ ಸಂಧ್ಯಾಕಾಲದಲ್ಲಿರುವ ಪುರುಷರು, ಮಹಿಳೆಯರು ಪಾಲ್ಗೊಂಡರು. ಮಾತ್ರವಲ್ಲದೆ, ಪರಸ್ಪರ ಪ್ರಸ್ತುತದ ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ಈಗಿನ ಸಮಾಜಕ್ಕೆ ಮಾದರಿ ಎಂಬಂತೆ ವಿವಿಧ ಸಾಧನೆ ಮಾಡಿದವರನ್ನೂ ಸನ್ಮಾನಿಸುವ ಮೂಲಕವೂ ಉತ್ತೇಜನ ನೀಡಲಾಯಿತು.

ಇವೆಲ್ಲ ನಡೆದಿದ್ದು ನಗರದ ಹೊರವಲಯದಲ್ಲಿರುವ ಕ್ಯಾಪಿಟಲ್ ವಿಲೇಜ್ ಆವರಣದಲ್ಲಿ ತಾ. 17ರಂದು ಕೊಡಗು ಜಿಲ್ಲಾ ಹಿರಿಯ ನಾಗರಿಕರ ವೇದಿಕೆಯ ಈ ಬಾರಿಯ ಎರಡನೆಯ ಸಾಮಾನ್ಯ ಸಭೆಯ ಚಿತ್ರಣವಿದು. ಇಲ್ಲಿ ವೇದಿಕೆಯ ಸದಸ್ಯರಾಗಿರುವ ರಾಜಕಾರಣಿಗಳು, ಬೆಳೆಗಾರರು, ಆಟಗಾರರು, ವ್ಯಾಪಾರಿಗಳು, ನಿವೃತ್ತ ಅಧಿಕಾರಿಗಳು ಸೇರಿದಂತೆ ಸಮಾಜದ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿದವರು ಒಂದಾಗಿ ಪಾಲ್ಗೊಂಡಿದ್ದರಲ್ಲದೆ, ಈ ಎಲ್ಲಾ ಆಗು-ಹೋಗುಗಳ ನಡುವೆ ತಮ್ಮ ದುಃಖ ದುಮ್ಮಾನಗಳನ್ನು ಮರೆತರು.

ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಕ್ರೀಡಾಕೂಟದೊಂದಿಗೆ ಸಭಾ ಕಾರ್ಯಕ್ರಮ- ಸನ್ಮಾನವೂ ಜರುಗಿತು.

ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲೆ ಮಂಡೇಪಂಡ ಪುಷ್ಪಾಕುಟಣ್ಣ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಕಳ್ಳಿಚಂಡ ಕಾರ್ಯಪ್ಪ, ಹಿರಿಯ ರಾಜಕಾರಣಿ, ವೇದಿಕೆಯ ಸದಸ್ಯ ಹಾಗೂ ಸಲಹೆಗಾರರಾಗಿರುವ ಯಂ.ಸಿ. ನಾಣಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ವಯಸ್ಸು ಕಾಲದ ಬದುಕು, ನಿವೃತ್ತ ಜೀವನದ ಕುರಿತ ಪುಷ್ಪಾ ಕುಟ್ಟಣ್ಣ ಅವರು ಸಲಹೆಯಿತ್ತರೆ, ಯಂ.ಸಿ. ನಾಣಯ್ಯ ಅವರು ಪ್ರಸ್ತುತ ಜಿಲ್ಲೆಯಲ್ಲಿ ಹೋಂ ಸ್ಟೇಗಳ ಅನಧಿಕೃತ ಕಾರ್ಯಚಟುವಟಿಕೆಯಿಂದ ಸ್ಥಳೀಯರು ಪರಕೀಯರಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.

ಕೊಡಗು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಡೀನ್ ಡಾ. ಕಳ್ಳಿಚಂಡ ಕಾರ್ಯಪ್ಪ ಅವರು ಹಿರಿಯರಿಗೆ ಆರೋಗ್ಯದ ಬಗ್ಗೆ ಸೂಕ್ತ ಗಮನ ಹರಿಸುವಂತೆ ಸಲಹೆಯಿತ್ತರಲ್ಲದೆ, ಸರಕಾರದಿಂದ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ವಿವಿರವಿತ್ತರು.

ಸಭಾ ಕಾರ್ಯಕ್ರಮದಲ್ಲಿ ಕೊಡಗಿನ ಕಿತ್ತಳೆಯನ್ನು ಸಮೃದ್ಧವಾಗಿ ಬೆಳೆದು ‘ಆರೆಂಜ್ ಕಿಂಗ್’ ಎಂದು ಹೆಸರುಗಳಿಸುವದರೊಂದಿಗೆ ಇತರ ಬೆಳೆಗಳನ್ನೂ ಉತ್ತಮವಾಗಿ ಬೆಳೆದು ಮಾದರಿಯಾಗಿರುವ ಪೊನ್ನಚೆಟ್ಟೀರ ಸುರೇಶ್ ಸುಬ್ಬಯ್ಯ, ಮಾಜಿ ಅಂತರರಾಷ್ಟ್ರೀಯ ಹಾಕಿ ಆಟಗಾರ ಮಂಡೇಪಂಡ ಮೊಣ್ಣಪ್ಪ ಅವರುಗಳನ್ನು ವೇದಿಕೆಯಿಂದ ಸನ್ಮಾನಿಸಲಾಯಿತು.

ಮಡಿಕೇರಿಯ ಹಿರಿಯ ನಾಗರಿಕರಾದ ವೇದಿಕೆಯ ಉಪಾಧ್ಯಕ್ಷೆ ಡಿ.ಸಿ. ಲೀಲಾವತಿ ಅವರ ಅಧ್ಯಕ್ಷತೆ ಯಲ್ಲಿ ಕಾರ್ಯಕ್ರಮ ನಡೆಯಿತು. ಧರಣಿ ಪ್ರಾರ್ಥಿಸಿ, ಕಾರ್ಯದರ್ಶಿ ಪಿ.ಎಸ್. ಅರವಿಂದ್ ವರದಿ ನೀಡಿದರು. ಡಿ.ಸಿ.ಲೀಲಾವತಿ ಸ್ವಾಗತಿಸಿ, ಬಾದುಮಂಡ ಮುತ್ತಪ್ಪ ವಂದಿಸಿದರು. ಹಿರಿಯ ನಾಗರಿಕರ ವೇದಿಕೆ 30 ಜನ ಸದಸ್ಯರಿಂದ ಪ್ರಾರಂಭ ಗೊಂಡಿದ್ದು, ಪ್ರಸ್ತುತ ಮಡಿಕೇರಿಯ ಜಿ.ಟಿ. ರಾಘವೇಂದ್ರ ಅವರು ಅಧ್ಯಕ್ಷರಾಗಿದ್ದು, 540 ಸದಸ್ಯರನ್ನು ಹೊಂದಿದೆ.