ಮಡಿಕೇರಿ, ಮಾ. 20: ಪ್ರಸ್ತುತ ಪೈಪೋಟಿ ಯುಗದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಆಂಗ್ಲ ಭಾಷೆ ಪ್ರಮುಖ ಪಾತ್ರವಹಿಸುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂಗ್ಲೀಷ್ ಸಂವಹನವನ್ನು ಈಗಿನಿಂದಲೇ ಅಭ್ಯಸಿಸಿಕೊಳ್ಳಿ ಎಂದು ಸೌರಭ ಕಲಾ ಪರಿಷತ್ತು ನಿರ್ದೇಶಕಿ ಡಾ. ಶ್ರೀವಿದ್ಯಾ ಮುರಳೀಧರ ಕರೆ ನೀಡಿದರು. ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಪ್ರತಿಭೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಆಂಗ್ಲ ಭಾಷೆಯ ಸಂವಹನ ಕೌಶಲ್ಯವೇ ಪ್ರಮುಖ ಮಾನದಂಡವಾಗಿ ಬಳಕೆಯಾಗುತ್ತಿರುವದರಿಂದ ಇಂಗ್ಲೀಷ್ ಸಂವಹನವನ್ನು ಕರಗತ ಮಾಡಿಕೊಂಡರೆ ಅದು ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಸಮಾನ ಪ್ರಾಶಸ್ತ್ಯ ನೀಡಬೇಕಿದೆ. ಇಂದಿನ ಪೈಪೋಟಿ ಯುಗದಲ್ಲಿ ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕಿರುವದು ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಸ್ಮಾರ್ಟ್‍ಫೋನ್ ಗೀಳಿನಿಂದ ಹೊರಬಂದು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರತರುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಡಾ. ದಯಾನಂದ ನಾಯ್ಕ್, ವಿದ್ಯಾರ್ಥಿಗಳು ಯಾವದೇ ಕಾರಣಕ್ಕೂ ಎದೆಗುಂದದೆ ಸವಾಲುಗಳನ್ನು ನಗುನಗುತ್ತಲೇ ಸ್ವೀಕರಿಸಬೇಕು ಎಂದು ಕರೆ ನೀಡಿದರು. ನಮ್ಮಲ್ಲೇ ಇರುವ ಕೀಳರಿಮೆ ಹಾಗೂ ನಕಾರಾತ್ಮಕ ಚಿಂತನೆಗಳೇ ನಮ್ಮ ಶತ್ರುಗಳಾಗಿದ್ದು, ಅವುಗಳನ್ನು ಕಡೆಗಣಿಸಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಯಶಸ್ಸಿನ ಗುರಿ ಮುಟ್ಟುವ ತನಕ ವಿರಮಿಸದೆ ನಿರಂತರ ಪ್ರಯತ್ನದಲ್ಲಿ ತೊಡಗಿ ಎಂದರು. ಪುಸ್ತಕಗಳು ವಿದ್ಯಾರ್ಥಿಗಳಿಗೆ ಉತ್ತಮ ಗೆಳೆಯನಾಗಬಲ್ಲದು ಎಂದು ತಿಳಿಸಿದ ಅವರು, ಪ್ರಸಿದ್ಧ ಲೇಖಕ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಿದರು.

ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ಉಪನ್ಯಾಸಕಿ ಹಾಗೂ ಸಹಪಠ್ಯಚಟುವಟಿಕೆ ಸಂಚಾಲಕಿ ಡಾ. ಗಾಯತ್ರಿ ವಾರ್ಷಿಕ ಸಾಧನಾ ವರದಿ ಮಂಡಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಹೆಗಡೆ ಸ್ವಾಗತಿಸಿದರು. ವಿದ್ಯಾರ್ಥಿ ಮುಖಂಡರಾದ ಲೋಹಿತ್ ಎಂ. ಆರ್, ಅಧ್ಯಕ್ಷ, ಜನನಿ ಎಂ.ಡಿ, ಉಪಾಧ್ಯಕ್ಷೆ, ತೃಪ್ತಿ ಕೆ.ಪಿ., ಜಂಟಿ ಕಾರ್ಯದರ್ಶಿ, ಸ್ವಪ್ನ ಎಸ್.ಆರ್., ಕ್ರೀಡಾ ಕಾರ್ಯದರ್ಶಿ, ಕಿರಣ್ ಬಿ.ಐ., ಕ್ರೀಡಾ ಕಾರ್ಯದರ್ಶಿ, ಅರುಣ್‍ಕುಮಾರ್ ಪಿ.ಎಸ್., ಸಾಂಸ್ಕøತಿಕ ಕಾರ್ಯದರ್ಶಿ, ನೀಲಮ್ಮ ಬಿ.ಎಂ., ಸಾಂಸ್ಕøತಿಕ ಕಾರ್ಯದರ್ಶಿ, ಅಹಲ್ಯಅಪ್ಪಚ್ಚು ಡಿ.ಎ. ಕಾರ್ಯದರ್ಶಿ, ಸುಭಾಶ್ ಸಿ.ಎಸ್., ಜಂಟಿ ಕಾರ್ಯದರ್ಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಗುರುತರ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.