ಮಡಿಕೇರಿ, ಮಾ. 20: ಅಂತರರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿವಾರಣ ದಿನದ ಅಂಗವಾಗಿ ತಾ. 21 ರಂದು (ಇಂದು) ಜಿಲ್ಲಾಡಳಿತ ಭವನದ ಮುಂಭಾಗ ಕೊಡವ ಲ್ಯಾಂಡ್ ಸ್ವಾಯತ್ತತೆ (ಅಟೋನಮಿ) ಕೇಂದ್ರಾಡಳಿತ ಪ್ರದೇಶ ಹಕ್ಕೊತ್ತಾಯವು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್‍ನಿಂದ ಸತ್ಯಾಗ್ರಹ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಬೆಳಿಗ್ಗೆ 10.30 ರಿಂದ 12.30 ಗಂಟೆಯವರೆಗೆ ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಸತ್ಯಾಗ್ರಹ ನಡೆಸಿ, ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ಪ್ರಧಾನ ಮಂತ್ರಿಗಳು, ಕೇಂದ್ರ ಸಚಿವರುಗಳಿಗೆ ಸಲ್ಲಿಸಲಾಗುವದೆಂದು ತಿಳಿಸಿದರು. ಸಂವಿಧಾನದ 244 ವಿಧಿ ರೆಡ್ ವಿದ್ 6 ಮತ್ತು 8 ನೇ ಶೆಡ್ಯೂಲ್ ಪ್ರಕಾರ ಕೊಡವ ಲ್ಯಾಂಡ್ ಸ್ವಾಯತ್ತತೆ ರಚನೆಯಾಗಬೇಕು ಮತ್ತು ಆಂತರಿಕ ರಾಜಕೀಯ ಸ್ವಯಂ ನಿರ್ಣಯ ಹಕ್ಕು ದೊರಕಬೇಕು, ಸಂವಿಧಾನದ 2ಮತ್ತು 3 ನೇ ವಿಧಿ ಪ್ರಕಾರ ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ರಚಿಸಬೇಕು, ಕೊಡವ ಕ್ಷಾತ್ರ ಬುಡಕಟ್ಟು ಜನಾಂಗವನ್ನು ಸಂವಿಧಾನದ 340-342 ವಿಧಿಯಂತೆ ಶೆಡ್ಯೂಲ್ ಪಟ್ಟಿಗೆ ಸೇರಿಸಬೇಕು, ಸಂವಿಧಾನ ಪರಮಾರ್ಶೆ ಆಯೋಗದ ಶಿಫಾರಸ್ಸಿನಂತೆ ಸಂವಿಧಾನದ 371 ನೇ ವಿಧಿ ಪ್ರಕಾರ ಕೊಡಗು ಅಭಿವೃದ್ಧಿ ಮಂಡಳಿ ರಚನೆ, ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕೆಂದು ನಾಚಪ್ಪ ಆಗ್ರಹಿಸಿದರು.
ಟಿಪ್ಪು ನಿರಾಯುಧ ಕೊಡವರನ್ನು 1785 ರ ಡಿಸೆಂಬರ್ 13 ರಂದು ನರಮೇಧ ನಡೆಸಿದ ದೇವಟ್ ಪರಂಬುವಿನಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸಬೇಕು ಮತ್ತು ದೇವಟ್ ಪರಂಬು ದುರಂತದಲ್ಲಿ ಮಡಿದ ಕೊಡವರ ವಿಚಾರವನ್ನು ವಿಶ್ವ ಸಂಸ್ಥೆಯ ಹೋಲೋಕಾಸ್ಟ್ ರಿಮೆಂಬರೆನ್ಸ್ ಪಟ್ಟಿಯಲ್ಲಿ ಸೇರಿಸಬೇಕೆಂದು ತಿಳಿಸಿದರು. ವೇದಕಾಲದ 7 ಪವಿತ್ರ ಜೀವನದಿಗಳಲ್ಲೊಂದಾದ ಕಾವೇರಿ ನದಿಗೆ ಜೀವಂತ ವ್ಯಕ್ತಿಯ (ಲೀವಿಂಗ್ ಎಂಟಿಟಿ ಸ್ಟೇಟಸ್) ಶಾಸನಬದ್ಧ ಸ್ಥಾನಮಾನ ನೀಡಿ ಸಂರಕ್ಷಿಸಬೇಕೆಂದು ನಾಚಪ್ಪ ಆಗ್ರಹಿಸಿದರು.