ಮಡಿಕೇರಿ, ಮಾ. 20: ಜೆಡಿಎಸ್ ಪಕ್ಷದ ಸಭೆ ಚೇರಂಬಾಣೆ ಕೊಡವ ಸಮಾಜದಲ್ಲಿ ನಡೆಯಿತು. ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದೇ ಇದ್ದರೂ ಪಂಚಾಯಿತಿ ಮಟ್ಟದಿಂದ ಜನತೆಗಾಗಿ ಸಹಾಯ ಮಾಡುತ್ತಲೇ ಬಂದಿದ್ದೇವೆ. ಜನರ ಮನಸ್ಸನ್ನು ಗೆಲ್ಲುವಂಥ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಪಕ್ಷ ದೇವೇಗೌಡರ ಕಾಲದಿಂದಲೂ ಮಾಡುತ್ತಲೇ ಬಂದಿದೆ. ಪಕ್ಷದ ಪ್ರತಿಯೊಂದು ಯೋಜನೆಗಳ ಪ್ರಯೋಜನ ಈ ಸಮಾಜದ ಕಟ್ಟಕಡೆಯ ಮನುಷ್ಯನನ್ನು ತಲುಪಿವೆ. ವೀರಾಜಪೇಟೆ ಕ್ಷೇತ್ರದಲ್ಲಿ 1956 ರಿಂದೀಚೆಗೆ ನಿರಂತರವಾಗಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯನ್ನೇ ಆಯ್ಕೆ ಮಾಡುತ್ತಾ ಬಂದಿದ್ದಾರೆ. ರಾಷ್ಟ್ರೀಯ ಪಕ್ಷಗಳಿಗೆ ಭರಪೂರ ಅವಕಾಶಗಳಿದ್ದರೂ ಅವರು ಈ ಜಿಲ್ಲೆಗಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಜೋಯಪ್ಪ, ಈಗಾಗಲೇ ರಾಷ್ಟ್ರೀಯ ಪಕ್ಷಗಳು ಸಮಾವೇಶ ಮಾಡುತ್ತಾ ಬರುತ್ತಿವೆ. ಅವರೆಲ್ಲಾ ಅಷ್ಟೊಂದು ಕೋಟಿಗಳನ್ನು ತರುವದು ಎಲ್ಲಿಂದ, ಆ ಖರ್ಚಿಗೆಲ್ಲಾ ಲೆಕ್ಕ ಇಡುವವರು ಯಾರು? ನಮ್ಮ ಜೆಡಿಎಸ್ ಪಕ್ಷದ ಕುಮಾರಪರ್ವ ಸಮಾವೇಶ ಸದ್ಯದಲ್ಲೇ ನಮ್ಮ ಜಿಲ್ಲೆಗೂ ಬರಲಿದೆ. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದೊಳಗೆ ಯಾವದೇ ಭಾಗಗಳಿಲ್ಲ. ನಾವೆಲ್ಲ ಒಂದು ಎನ್ನುವಂತೆ ಕೆಲಸ ಮಾಡುತ್ತಿದ್ದೇವೆ ಎಂದು ನುಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಮಾತನಾಡಿ, ಮತದಾರ ಎಲ್ಲಿಯವರೆಗೆ ದಡ್ಡನಾಗಿರುತ್ತಾನೆ ಅಲ್ಲಿಯ ತನಕ ದಗಾಕೋರರು ನಮ್ಮನ್ನು ಆಳುತ್ತಾ ಇರುತ್ತಾರೆ ಎಂದು ಕಾರ್ಲ್‍ಮಾಕ್ರ್ಸ್ ನ ಮಾತನ್ನು ನೆನಪಿಸಿದರು.
ಇದೇ ಸಂದರ್ಭ ಗ್ರಾಮದ ಸುಮಾರು 80ಕ್ಕೂ ಅಧಿಕ ಮಂದಿ, ಬೇರೆ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ನಗರ ಅಧ್ಯಕ್ಷ ಮತೀನ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೇದಾವತಿ, ಜೆಡಿಎಸ್ ಪಕ್ಷದ ಹಲವು ಮುಖಂಡರುಗಳು, ಸುಗುಣ, ಅನಂತ್, ಗ್ರಾಮಸ್ಥರು ಭಾಗವಹಿಸಿದ್ದರು.