ಮಡಿಕೇರಿ, ಮಾ. 20: ಕಾಫಿ ಮತ್ತು ಕರಿಮೆಣಸು ಸೇರಿದಂತೆ ಇತರ ವಾಣಿಜ್ಯ ಬೆಳೆಗಳ ಬೆಲೆ ಕುಸಿತಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಸಹಕಾರ ಸಂಘಗಳಲ್ಲಿ ರೈತರು ಮಾಡಿದ ಧೀರ್ಘಾವಧಿ ಸಾಲ ಮರುಪಾವತಿಗೆ ಒಂದು ವರ್ಷಗಳ ಕಾಲ ಸಮಯಾವಕಾಶವನ್ನು ನೀಡುವಂತೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಮನವಿ ಮಾಡಿದರು.

ನಗರದ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಪಿಕಾರ್ಡ್ ಬ್ಯಾಂಕುಗಳ ಅಧ್ಯಕ್ಷರುಗಳಿಗೆ ಬೆಳೆ - ಬೆಲೆ ಕುಸಿತ ಸಭೆ ಹಾಗೂ ಚುನಾವಣಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಜಿಲ್ಲೆಯ ಬೆಳೆಗಾರರಿಗೆ ರೂ. 10 ಲಕ್ಷದವರೆಗೆ ವಿವಿಧ ಸಹಕಾರ ಸಂಘಗಳಲ್ಲಿ ರೈತರ ಸಾಲವಿದೆ. ಪ್ರಸ್ತುತ ಕಾಫಿ ಮತ್ತು ಕರಿಮೆಣಸು ಸೇರಿದಂತೆ ಇತರ ವಾಣಿಜ್ಯ ಬೆಳೆಗಳ ಬೆಲೆ ಕುಸಿತಗೊಂಡಿದ್ದರಿಂದ ಸಾಲ ಮರುಪಾವತಿ ಸಾಧ್ಯವಿಲ್ಲದ ಕಾರಣ ಸಹಕಾರ ಸಂಘಗಳು ಸೇರಿದಂತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸರಕಾರ ಈ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಅಲ್ಲದೆ, ಜಿಲ್ಲೆ ಶಾಸಕರು ಈ ಬಗ್ಗೆ ಸರಕಾರದ ಮಟ್ಟದಲ್ಲಿ ವ್ಯವಹರಿಸಿ ಒತ್ತಡ ಹೇರಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.

ಜಿಲ್ಲೆಯ 65 ಪ್ಯಾಕ್ಸ್‍ಗಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಬೆಳೆ-ಬೆಲೆ ಕುಸಿತ ಸಭೆ ಹಾಗೂ ಚುನಾವಣಾ ತರಬೇತಿ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ಅಲ್ಲದೆ, ರೈತರಿಗೆ ಹೆಚ್ಚಿನ ಅನುಕೂಲವಾಗ ಲೆಂದು ಈ ತರಬೇತಿ ಕಾರ್ಯಕ್ರಮದ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗುವದು ಎಂದರು.

ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ಕೊಡಗಿನ ಕಾಫಿ ತೋಟಗಳಲ್ಲಿ ಪರಿಸರವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಾಫಿಗೆ ಅಗತ್ಯವಾಗಿ ಸರಕಾರ ಬೆಂಬಲ ಬೆಲೆಯನ್ನು ಘೋಷಿಸಿ ನೀಡಬೇಕು, ಅದರೊಂದಿಗೆ ಪಶ್ಚಿಮಘಟ್ಟಗಳ ಪ್ರದೇಶವಾದ ಕೊಡಗಿನಲ್ಲಿ ಏಲಕ್ಕಿ ಬೆಳೆಗೂ ಸರಕಾರ ಹೆಚ್ಚಿನ ಉತ್ತೇಜನ ನೀಡಬೇಕೆಂದು ದೇವಯ್ಯ ಆಗ್ರಹಿಸಿದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಕೆ.ಎಸ್. ಹರೀಶ್ ಪೂವಯ್ಯ, ನಿರ್ದೇಶಕರುಗಳಾದ ಬಿ.ಎ. ರಮೇಶ್ ಚಂಗಪ್ಪ, ಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಕೊಮಾರಪ್ಪ, ಜನತಾ ಬಜಾರ್ ಅಧ್ಯಕ್ಷ ರವಿಬಸಪ್ಪ ಉಪಸ್ಥಿತರಿದ್ದರು.