ಸೋಮವಾರಪೇಟೆ,ಮಾ.20: ಮಹಿಳೆಯು ಪುರುಷನ ಸಮನಾಗಿ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದು ಮಹಿಳೆಯರ ಕೆಲಸದಲ್ಲಿ ದಕ್ಷತೆ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆಯಲ್ಲಿ ಹೆಚ್ಚಿನ ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಹೆಚ್.ಆರ್. ಹರೀಶ್ ಅಭಿಪ್ರಾಯಿಸಿದರು.
ಇಲ್ಲಿನ ಲಯನ್ಸ್ ಸಂಸ್ಥೆಗೆ ಅಧಿಕೃತ ಭೇಟಿ ನೀಡಿ ವಿವಿಧ ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಿದ ನಂತರ, ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಚಾರಗಳು ಮತ್ತು ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯ ಎಂದ ಅವರು, ಲಯನ್ಸ್ ಸಂಸ್ಥೆಯು ಅನೇಕ ಸೇವಾ ಕೈಂಕರ್ಯದೊಂದಿಗೆ ಸಮಾಜದ ಶೋಷಿತರ, ದೀನದಲಿತರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೀಡಿ ಸುಮಾರು 16 ಮಹಿಳಾ ಅಧ್ಯಕ್ಷರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಎ.ಎಸ್.ಮಹೇಶ್ ಮಾತನಾಡಿ, ಸೇವಾ ಮನೋಭಾವನೆ ಯೊಂದಿಗೆ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಲಯನ್ಸ್ ಸಂಸ್ಥೆಯ ಪಾತ್ರ ಹಿರಿದು. ನಮ್ಮ ಜೀವನದಲ್ಲಿ ಗಳಿಸಿದ ಸಂಪಾದನೆ ಯಲ್ಲಿ ಸ್ವಲ್ಪ ಭಾಗವನ್ನಾದರೂ ಸಮಾಜ ಸೇವೆಗೆ ಮುಡಿಪಾಗಿಡಬೇಕು ಎಂದರು.
ವೇದಿಕೆಯಲ್ಲಿ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಎಂ. ಹರೀಶ್ ಅಯ್ಯಣ್ಣ, ಜಿಲ್ಲೆಯ ವಿವಿಧ ಲಯನ್ಸ್ ಸಂಸ್ಥೆಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.