ಶನಿವಾರಸಂತೆ, ಮಾ. 20: ಪಟ್ಟಣದ ಶ್ರೀರಾಮ ಮಂದಿರದಲ್ಲಿ ಆಡಳಿತ ಮಂಡಳಿ ವತಿಯಿಂದ ಶ್ರೀರಾಮ ಜನ್ಮದಿನ ಪ್ರಯುಕ್ತ ತಾ. 21ರಿಂದ 25ರವರೆಗೆ ವಿಶೇಷ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾ. 21ರಂದು (ಇಂದು) ಸಂಜೆ ಶ್ರೀಸೀತಾಲಕ್ಷ್ಮಣ, ಆಂಜನೇಯ ಸಹಿತ ಶ್ರೀರಾಮ ದೇವರ ಮೂರ್ತಿಗಳಿಗೆ ಪುಷ್ಪಾಲಂಕಾರ ಸೇವೆ ತಾ. 22ರಂದು ಹಣ್ಣಿನ ಅಲಂಕಾರ ಸೇವೆ, ತಾ. 23ರಂದು ವೀಳ್ಯದೆಲೆ, ವಸ್ತ್ರಾಲಂಕಾರ ಸೇವೆ ಹಾಗೂ ತಾ. 24ರಂದು ತುಳಸಿ ಅಲಂಕಾರ ಸೇವೆ ನಡೆಯಲಿದೆ. ತಾ. 25ರಂದು ಬೆಳಿಗ್ಗೆ 8 ಗಂಟೆಗೆ ಶ್ರೀರಾಮ ಜನ್ಮದಿನದ ಪ್ರಯುಕ್ತ ಮಹಾಗಣಪತಿ, ನವಗ್ರಹ ಪೂಜಾ ಪೂರ್ವಕ ಶ್ರಿಸೀತಾಲಕ್ಷ್ಮಣ ಆಂಜನೇಯ ಸಹಿತ ಶ್ರೀರಾಮನಿಗೆ ಫಲ ಪಂಚಾಮೃತ ಅಭಿಷೇಕ, ಪುರುಷಸೂಕ್ತ, ನಾರಾಯಣ ಸೂಕ್ತ, ಶ್ರೀಸೂಕ್ತ ಜಲಾಭಿಷೇಷ ಹಾಗೂ ಅಲಂಕಾರ ಸೇವೆ ನಡೆಯಲಿದೆ.
10 ಗಂಟೆಗೆ ಮಹಾಗಣಪತಿ ಹೋಮ, ನವಗ್ರಹ ಹೋಮ, ಆಂಜನೇಯ ಸ್ವಾಮಿಗೆ ಫಲಹೋಮ, ಶ್ರೀರಾಮ ತಾರಕ ಹೋಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀಸೀತಾಲಕ್ಷ್ಮಣ ಆಂಜನೇಯ ಸಹಿತ ಶ್ರೀರಾಮ ದೇವರ ಉತ್ಸವ ಮೂರ್ತಿಗಳನ್ನು ವಿದ್ಯುತ್ ಅಲಂಕೃತ ಭವ್ಯವಾದ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವದು. ಎಡೆಯೂರಿನ ಶ್ರೀವೀರಭದ್ರಸ್ವಾಮಿ ಜಾನಪದ ಕಲಾತಂಡದಿಂದ ವೀರಗಾಸೆ ನೃತ್ಯ ಮತ್ತು ವಾದ್ಯ ಇರುತ್ತದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.