ಕುಶಾಲನಗರ, ಮಾ. 20: ಅನಾರೋಗ್ಯಕರ ಪೈಪೋಟಿ ನಡುವೆ ಪ್ರಕೃತಿಯ ದುರುಪಯೋಗ ಅಧಿಕಗೊಳ್ಳುವ ಮೂಲಕ ನದಿ ಮೂಲಗಳು ನಾಶಗೊಳ್ಳುತ್ತಿವೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದ ಮಾತೆ ಕಾವೇರಿ ಆರತಿ ಬಳಗ ಮತ್ತು ಅರ್ಚಕರ ಸಂಘದ ಆಶ್ರಯದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ ಮಹಾ ಆರತಿ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಮಳೆಗಾಗಿ ಪ್ರಾರ್ಥಿಸಿ ನಡೆದ ರುದ್ರಹೋಮ ಪೂಜಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನದಿಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಾಗಿದೆ. ಜನರಿಗೆ ಅರಿವು ಮೂಡಿಸುವ ಮೂಲಕ ಪ್ರಕೃತಿಯ ಉಳಿವಿಗೆ ಕಾರಣರಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಆತಂಕದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಕುಶಾಲನಗರ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್, ಕುಶಾಲನಗರ ಗಣಪತಿ ದೇವಾಲಯ ಪ್ರಧಾನ ಅರ್ಚಕರು ಹಾಗೂ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ ಅಪ್ಪಣ್ಣ, ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಮಾತನಾಡಿದರು.
ವೇದಿಕೆಯಲ್ಲಿ ಕೊಡವ ಸಮಾಜ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ದೇವಾಲಯ ಒಕ್ಕೂಟದ ಗೌರವ ಅಧ್ಯಕ್ಷ ಕೆ.ಆರ್. ಶಿವಾನಂದನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಚಂದ್ರಾವತಿ, ಕೊಡಗು ಜಿಲ್ಲಾ ವೀರಶೈವ ಜಂಗಮ ಪುರೋಹಿತರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಶಾಸ್ತ್ರಿ, ಕಾವೇರಿ ನದಿ ಜಾಗೃತಿ ಸಮಿತಿ ಸಂಚಾಲಕ ಡಿ.ಆರ್. ಸೋಮಶೇಖರ್ ಇದ್ದರು.
ಕಾವೇರಿ ಮಹಾ ಆರತಿ ಬಳಗದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಸ್ವಾಗತಿಸಿದರು. ಕುಶಾಲನಗರ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಕೀರ್ತನೆಗಳು ನಡೆದವು. ಕುಶಾಲನಗರ ದೇವಾಲಯ ಒಕ್ಕೂಟದ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಕುಶಾಲನಗರದ ವಿವಿಧ ದೇವಾಲಯಗಳ 15ಕ್ಕೂ ಹೆಚ್ಚು ಅರ್ಚಕರು ರುದ್ರಹೋಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪರಮೇಶ್ವರ ಭಟ್ ವಂದಿಸಿದರು.