ಮಡಿಕೇರಿ, ಮಾ.20: : ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಇದೇ ತಾ. 23 ರಿಂದ ಏಪ್ರಿಲ್ 6 ರ ವರೆಗೆ ನಡೆಯಲಿದ್ದು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸೋಮವಾರ ಮಾಹಿತಿ ಪಡೆದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಂಬಂಧಿಸಿದಂತೆ ಯಾವದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದೆ ಸುಗಮವಾಗಿ ಪರೀಕ್ಷೆ ನಡೆಸುವಂತೆ ಎಲ್ಲಾ ಹಂತದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಪ್ರಶ್ನೆ ಪತ್ರಿಕೆಯನ್ನು ಖಜಾನೆಯಲ್ಲಿ ಸಂರಕ್ಷಿಸುವದು, ತರಿಸಿಕೊಳ್ಳುವದು, ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಮಾರ್ಗಾಧಿಕಾರಿಗಳ ಮೂಲಕ ತೆಗೆದುಕೊಂಡು ಹೋಗುವದು, ಪರೀಕ್ಷಾ ಸಮಯ ಪಾಲನೆ ಮಾಡುವದು ಹೀಗೆ ಹಲವು ಕಾರ್ಯಗಳನ್ನು ವ್ಯವಸ್ಥಿತವಾಗಿ ಮತ್ತು ಎಚ್ಚರಿಕೆಯಿಂದ ನಿರ್ವಹಿಸುವಂತೆ ಸೂಚನೆ ನೀಡಿದರು.

ಖಜಾನೆಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸುವದು. ತಹಶೀಲ್ದಾರರು, ಖಜಾನಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಸಂಬಂಧಿಸಿದ ಖಜಾನೆಗಳಿಂದ ಪ್ರಶ್ನೆ ಪತ್ರಿಕೆಯನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಒಟ್ಟು 7651 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಹಾಗೆಯೇ 127 ಖಾಸಗಿ ವಿದ್ಯಾರ್ಥಿಗಳು ನಗರದ ಸಂತ ಜೋಸೆಫರ ಕಾಲೇಜಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಒಟ್ಟು 27 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಂಜುಳಾ ಅವರು ತಿಳಿಸಿದರು.

ಮಡಿಕೇರಿ ತಾಲೂಕಿನಲ್ಲಿ ಒಟ್ಟು 2082 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇವರಲ್ಲಿ 1046 ಬಾಲಕರು ಮತ್ತು 1036 ಬಾಲಕಿಯರು, ಸೋಮವಾರಪೇಟೆ ತಾಲೂಕಿನಲ್ಲಿ 2852 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇವರಲ್ಲಿ 1358 ಬಾಲಕರು ಮತ್ತು 1494 ಬಾಲಕಿಯರು, ಹಾಗೆಯೇ ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು 2232 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇವರಲ್ಲಿ 1111 ಬಾಲಕರು ಮತ್ತು 1121 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದರು.

ವಿಷಯ ಪರಿವೀಕ್ಷಕರಾದ ಎಂ.ದೇವನಾಯಕ ಅವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ನಿಯೋಜಿಸಿರುವ ಮುಖ್ಯ ಅಧೀಕ್ಷಕರು ಮತ್ತು ಉಪ ಅಧೀಕ್ಷಕರು ಪಾಲಿಸಬೇಕಾದ ನಿಯಮಗಳು ಮತ್ತಿತರ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಂಬಂಧ ಪೊಲೀಸ್ ಬಂದೋಬಸ್ತ್ ಬಗ್ಗೆ ಮಾಹಿತಿ ನೀಡಿದರು.

ಜಿ.ಪಂ.ಉಪ ಕಾರ್ಯದರ್ಶಿ ಸಿದ್ದಲಿಂಗಮೂರ್ತಿ, ಜಿಲ್ಲಾ ಖಜಾನಾಧಿಕಾರಿ ಸತೀಶ್, ಕೂಡಿಗೆ ಡಯಟ್ ಪ್ರಾಂಶುಪಾಲರಾದ ವಾಲ್ಟರ್ ಡೆಮೆಲ್ಲೊ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಾಯತ್ರಿ, ನಾಗರಾಜಯ್ಯ, ಲೋಕೇಶ್, ಮುಖ್ಯ ಅಧೀಕ್ಷಕರು ಹಾಗೂ ಉಪ ಮುಖ್ಯ ಅಧೀಕ್ಷಕರು ಇತರರು ಇದ್ದರು.