ಮಡಿಕೇರಿ, ಮಾ. 20: ದೇಶದಲ್ಲೇ ಸ್ವಾತಂತ್ರ್ಯ ಬಳಿಕ ಜಾರಿಗೊಂಡಿರುವ ಏಕರೂಪ ತೆರಿಗೆ ಪದ್ಧತಿಗೆ ಪುಟ್ಟ ಜಿಲ್ಲೆ ಕೊಡಗು ಸ್ಪಂದಿಸುವದರೊಂದಿಗೆ, ಕರ್ನಾಟಕದಲ್ಲಿ ಜಿಎಸ್‍ಟಿ ಪರಿಣಾಮಕಾರಿ ಅನುಷ್ಠಾನಗೊಳ್ಳು ವಂತಾಗಿದೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ. ಈಚೆಗೆ ಕೇಂದ್ರ ವಿತ್ತ ಸಚಿವ ಅರುಣ್‍ಜೇಟ್ಲಿ ಅವರ ಸಮ್ಮುಖ ಜರುಗಿದ ಮಹತ್ವದ ಸಭೆಯೊಂದರಲ್ಲಿ ಇತರ ರಾಜ್ಯ ಗಳಿಗಿಂತಲೂ ಕರ್ನಾಟಕದಲ್ಲಿ ವ್ಯಾಪಾರೋದ್ಯಮಗಳು ಸಹಿತ ನಾಗರಿಕರು ಜಿಎಸ್‍ಟಿಗೆ ಉತ್ತಮವಾಗಿ ಒಲವು ಹೊಂದಿರುವದು ದೃಢಪಟ್ಟಿದೆ.ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಏಕರೂಪ ತೆರಿಗೆ ಪದ್ಧತಿ ಜಿಎಸ್‍ಟಿ ಜಾರಿಗೆ ಮುನ್ನ ಕೇವಲ ಕಚ್ಚಾ ಕಾಪಿಯಿಂದಲೇ ಶೇ. 70 ರಷ್ಟು ತೆರಿಗೆಯನ್ನು ‘ವ್ಯಾಟ್’ ರೂಪದಲ್ಲಿ ಸಂಗ್ರಹಿಸಲಾಗುತ್ತಿತ್ತು. ಪ್ರಸಕ್ತ ಕಚ್ಚಾ ಕಾಫಿಯನ್ನು ಜಿಎಸ್‍ಟಿ ನೀತಿಯಿಂದ ಹೊರತುಪಡಿಸಲಾಗಿದೆಯಾದರೂ, ಜಿಲ್ಲೆಯಲ್ಲಿ ತೆರಿಗೆ ಪಾವತಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜಿಎಸ್‍ಟಿ ಸರಳೀಕರಣ ನೀತಿಯು, ಸಾಕಷ್ಟು ಸುಧಾರಣೆಯೊಂದಿಗೆ ದಿನಗಳು ಉರುಳಿದಂತೆ ಪ್ರತಿಯೊಬ್ಬರಿಗೂ ತಮ್ಮನ್ನು ಸ್ವಯಂ ತೊಡಗಿಸಿಕೊಳ್ಳಲು ಪ್ರೇರೇಪಿಸುವಂತಾಗಿದೆ ಎಂದು ‘ಶಕ್ತಿ’ಗೆ ಮೂಲಗಳಿಂದ ಲಭಿಸಿದ ಅಂಕಿ ಅಂಶಗಳಿಂದ ಖಾತರಿಯಾಗಿದೆ. ಜಿಎಸ್‍ಟಿ ಸರಳೀಕರಣ ನೀತಿಯಿಂದ ಯಾವದೇ ವಸ್ತುಗಳ ಮೂಲ ಉತ್ಪಾದಕರು, ವಿತರಕರು, ಗ್ರಾಹಕರ ನಡುವಿನ ಸಂಬಂಧ ಗಟ್ಟಿಗೊಳ್ಳುವಂತಾಗಿದೆ. ಅಲ್ಲದೆ ವಾರ್ಷಿಕ ವಹಿವಾಟು ರೂ. 20 ಲಕ್ಷ ತನಕ ಜಿಎಸ್‍ಟಿ ತೆರಿಗೆ ಪದ್ಧತಿಯಿಂದ ವಿನಾಯಿತಿ ಇರುವ ಕಾರಣ ಸಾಮಾನ್ಯ ವರ್ತಕರು ಕೂಡ ತಾವಾಗಿಯೇ ಏಕರೂಪ ತೆರಿಗೆ ಪಾವತಿಗೆ ಒಲವು ಹೊಂದಿರುವದು ಕಂಡು ಬಂದಿದೆ.
ಏಪ್ರಿಲ್‍ನಿಂದ ಕಡ್ಡಾಯ : ಈಚೆಗಿನ ತೀರ್ಮಾನ ಪ್ರಕಾರ ಅಂತರ ರಾಜ್ಯ ಸರಕುಗಳನ್ನು ರೂ. 50 ಸಾವಿರ ಮೊತ್ತಕ್ಕಿಂತ ಮೇಲ್ಪಟ್ಟು (ಜಿಎಸ್‍ಟಿಗೆ ಒಳಪಟ್ಟವುಗಳನ್ನು) ಸಾಗಾಟಗೊಳಿಸುವಾಗ ಈವೇ ಬಿಲ್ (ಮೌಲ್ಯದೊಂದಿಗೆ ಸಾಗಾಣಿಕೆ ರಹದಾರಿ) ಬಳಕೆಯನ್ನು ಬರುವ ಏಪ್ರಿಲ್ 1 ರಿಂದ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಮುಂದುವರಿದು ಆಯಾ ರಾಜ್ಯಗಳ ಒಳಗೆ ಸಾಗಾಟಗೊಳಿಸಲು ಈವೇ ಬಿಲ್ ಜೂನ್ 1 ರಿಂದ ಜಾರಿಗೊಳಿಸಲು ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರಕಾರ ಕಡ್ಡಾಯ ಸೂಚನೆ ನೀಡಿದೆ.
ಈವೇ ಬಿಲ್ ನೀತಿಯನ್ನು ಕೇವಲ ಉತ್ಪಾದಕ, ವರ್ತಕ, ಗ್ರಾಹಕ ಸೇರಿದಂತೆ ಪ್ರತಿಯೊಬ್ಬ ನಾಗರಿಕನೂ ಪಾಲಿಸಲು ಕಾನೂನಿನಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ತಜ್ಞರು ಸುಳಿವು ನೀಡಿದ್ದಾರೆ. ಆ ಮೇರೆಗೆ ಯಾರೊಬ್ಬರೂ ಕೂಡ ರೂ. 50 ಸಾವಿರ ಮೇಲ್ಪಟ್ಟು ಮೊತ್ತದ ಯಾವದೇ ಸರಕು ಸಾಗಿಸುವಾಗ ಕೇಂದ್ರ ಸರಕಾರದ ಜಿಎಸ್‍ಟಿ ಪಟ್ಟಿಯಲ್ಲಿ ನಮೂದಾಗಿರುವ ಉತ್ಪನ್ನಗಳು ಅಥವಾ ಸಾಮಗ್ರಿಗಳು ಜಿಎಸ್‍ಟಿ ವ್ಯಾಪ್ತಿಗೆ ಒಳಪಡಲಿವೆಯೋ ಆ ಪಟ್ಟಿಯಲ್ಲಿ ನಮೂದಿಸಿರುವ ವಸ್ತುಗಳಿಗೆ ತೆರಿಗೆ ಜಾರಿಗೊಳ್ಳಲಿವೆ. ಇಲ್ಲಿಯೂ ಮೂಲ ಉತ್ಪಾದಕರೇ ಜಿಎಸ್‍ಟಿ ಪಾವತಿಸುವ ಮೂಲಕ ವಿತರಕರಿಗೆ ನೀಡುವ ಖರೀದಿ ಬಿಲ್ಲನ್ನು ಆಯಾ ತಪಾಸಣೆಗೊಳಪಟ್ಟಲ್ಲಿ ಮಾತ್ರ ಬಿಲ್ ಪ್ರದರ್ಶಿಸುವದು ಕಡ್ಡಾಯವಾಗಲಿದೆ.
26ನೇ ಜಿಎಸ್‍ಟಿ ಸಮಾವೇಶ : ಈಚೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ದೇಶದ ಆರ್ಥಿಕ ಸಲಹಾಗಾರರನ್ನು ಒಳಗೊಂಡಂತೆ ತಜ್ಞರ 26ನೇ ಜಿಎಸ್‍ಟಿ ಸಮಾವೇಶ ನಡೆದಿದ್ದು, ದೇಶದಲ್ಲಿ 60 ಸಾವಿರದಷ್ಟಿದ್ದ ತೆರಿಗೆದಾರರ ಸಂಖ್ಯೆ ಏಕರೂಪ ನೀತಿ ಜಾರಿ ಬಳಿಕ 1 ಕೋಟಿಗೂ ಅಧಿಕ ಗೊಂಡಿದೆ ಎಂದು ಮಾಹಿತಿ ಲಭಿಸಿದೆ. ಕರ್ನಾಟಕದಲ್ಲಿ ಪರಿಣಾಮಕಾರಿ ಜಿಎಸ್‍ಟಿ ನೀತಿ ಜಾರಿಗೊಂಡಿರುವ ಅಂಶ ಈ ವೇಳೆ ಬೆಳಕಿಗೆ ಬಂದಿದೆ.
(ಮೊದಲ ಪುಟದಿಂದ)
ಕರ್ನಾಟಕದ್ದೇ ಕೊಡುಗೆ : ಈ ಹಿಂದೆ ರಾಜ್ಯದಲ್ಲಿದ್ದ ‘ವ್ಯಾಟ್’ ನೀತಿಯ ಸಂದರ್ಭ ‘ಈ ಸುಗಮ’ ಸುಧಾರಿತ ತೆರಿಗೆಯ ಪರಿವರ್ತಿತ ಯೋಜನೆಯೆಂಬಂತೆ ದೇಶದಲ್ಲಿ ಏಕರೂಪ ತೆರಿಗೆ ಪದ್ಧತಿ ಜಿಎಸ್‍ಟಿ ಅತ್ಯಂತ ಸರಳೀಕರಣಗೊಂಡಿದ್ದು, ಪರೋಕ್ಷವಾಗಿ ದೇಶಕ್ಕೆ ಕರ್ನಾಟಕದ ಕೊಡುಗೆ ಇದಾಗಿದ್ದು, ಸ್ವಾತಂತ್ರ್ಯ ಭಾರತದಲ್ಲಿ ಜಾರಿಗೊಂಡಿರುವ ಅತ್ಯುತ್ತಮ ತೆರಿಗೆ ಪದ್ಧತಿ ಜಿಎಸ್‍ಟಿ ಎಂಬ ಶ್ಲಾಘನೆ ದೊರೆತಿರುವದಾಗಿ ಮೂಲಗಳು ತಿಳಿಸಿವೆ.
ಕೊಡಗು ಪ್ರಗತಿ : ಕೊಡಗಿನಲ್ಲಿ ಜಿಎಸ್‍ಟಿ ಜಾರಿ ಬಳಿಕ ಕಚ್ಚಾ ಕಾಫಿ ಉದ್ದಿಮೆ ಮುಕ್ತಗೊಂಡು, ಜಿಎಸ್‍ಟಿ ತೆರಿಗೆಯಿಂದ ಹೊರತುಪಡಿಸಿದ್ದರೂ, ಪ್ರವಾಸೋದ್ಯಮ, ಹೋಂಸ್ಟೇ, ವ್ಯಾಪಾರೋದ್ಯಮಗಳಿಂದ ತೆರಿಗೆ ಸಲ್ಲಿಕೆಯೂ ಸುಧಾರಣೆ ಕಂಡಿದೆಯಂತೆ. ಮಾತ್ರವಲ್ಲದೆ ಈ ಹಿಂದೆ ಸುಮಾರು 4,500 ಮಂದಿಯಿದ್ದ ತೆರಿಗೆದಾರರ ಸಂಖ್ಯೆ ಪ್ರಸಕ್ತ ಜಿಎಸ್‍ಟಿ ಜಾರಿ ಬಳಿಕ ಸ್ವಯಂ ನೋಂದಾಣಿಯೊಂದಿಗೆ 6000ಕ್ಕೂ ಅಧಿಕವಾಗಿರುವದು ಗೋಚರಿಸಿದೆ.
ಸ್ವಯಂ ಆಸಕ್ತಿ : ಕೊಡಗು ಜಿಲ್ಲೆಯಲ್ಲಿ ಬಹುತೇಕ ವ್ಯಾಪಾರೋದ್ಯಮಿಗಳು, ಸಾಮಾನ್ಯ ವರ್ತಕರು, ಗ್ರಾಮೀಣ ಜನತೆಗೆ ಜಿಎಸ್‍ಟಿ ಅರಿವಿನ ಬಗ್ಗೆ ಸ್ವಯಂ ಆಸಕ್ತಿಯೊಂದಿಗೆ ತರಬೇತಿ ಶಿಬಿರಗಳನ್ನು ಆಯೋಜಿಸಿ ಮಾಹಿತಿ ಪಡೆದುಕೊಂಡಿರುವದು ಕಂಡು ಬಂದಿದೆ. ಅಲ್ಲದೆ ಶಾಲಾ - ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾಮಾನ್ಯ ಜನತೆ ಕೂಡ ಶಿಬಿರಗಳನ್ನು ಶಿಕ್ಷಣ ಸಂಸ್ಥೆಗಳಲ್ಲೇ ಆಯೋಜಿಸಿ ಸಂಬಂಧಿಸಿದ ತಜ್ಞರಿಂದ ಮಾಹಿತಿ ಹೊಂದಿದ್ದಾರೆ.
ಒಟ್ಟಿನಲ್ಲಿ ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಕೂಡ ಕೇಂದ್ರದ ಏಕರೂಪ ತೆರಿಗೆ ಪದ್ಧತಿಗೆ ಉತ್ತಮ ಸ್ಪಂದನದೊಂದಿಗೆ, ಇಲ್ಲಿನ ಜನತೆ ಪ್ರಾಮಾಣಿಕ ನೆಲೆಯಲ್ಲಿ ಇತರೆಡೆಗಳಿಗಿಂತಲೂ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದು ಸಂಬಂಧಿಸಿದ ಮೂಲಗಳು ಖಚಿತಪಡಿಸಿವೆ. ಈ ಬಗ್ಗೆ ಯಾವದೇ ಗೊಂದಲ, ಮಾಹಿತಿ ಅವಶ್ಯಕತೆ ಇದ್ದಲ್ಲಿ ಸಂಬಂಧಿಸಿದ ಕಚೇರಿಯ ಸಹಾಯವಾಣಿ ಸಂಖ್ಯೆಗೆ 08272- 225901 ಕಚೇರಿ ವೇಳೆಯಲ್ಲಿ ಅಥವಾ ಖುದ್ದು ಸಂಪರ್ಕಿಸಲು ತಿಳಿಸಲಾಗಿದೆ.