ಮಡಿಕೇರಿ, ಮಾ. 19: ಹೊಸ ವರ್ಷದ ಯುಗಾದಿಯ ಹರುಷಕ್ಕೆ ನಿನ್ನೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವರುಣನ ಅಬ್ಬರದೊಂದಿಗೆ ವಾಯುವಿನ ನರ್ತನ ಹಾಗೂ ಸಿಡಿಲಿನ ಆರ್ಭಟ ದೈನಂದಿನ ಜೀವನವನ್ನು ಅಸ್ತವ್ಯಸ್ಥಗೊಳಿಸಿತು. ಜಿಲ್ಲಾ ಕೇಂದ್ರ ಮಡಿಕೇರಿಯ ನೂತನ ಮಾರುಕಟ್ಟೆ ಸಹಿತ ಅನೇಕ ರಸ್ತೆಗಳು ಕೊಳಕು ಸಹಿತ ಜಲಾವೃತಗೊಂಡರೆ, ದಶಕಗಳ ಸೇತುವೆಯೊಂದು ಕೊಡಂ ಬೂರುವಿನಲ್ಲಿ ಹಾನಿ ಗೊಂಡಿತು. ಹಾಕತ್ತೂರು, ಮೇಕೇರಿ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಹಲವು ಮನೆಗಳು ಹಾನಿಗೊಂಡವು.ಕಗ್ಗೋಡ್ಲುವಿನ ನೇಂದ್ರಬಾಳೆ ತೋಟವೊಂದು ಸಂಪೂರ್ಣ ನೆಲಕಚ್ಚಿದ್ದು, ಮಡಿಕೇರಿ-ಮೂರ್ನಾಡು ನಡುವೆ ಅಲ್ಲಲ್ಲಿ ಮರಗಳು ಮುರಿದು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ಥ ಗೊಂಡಿತು. ಸೋಮವಾರಪೇಟೆ ತಾಲೂಕಿನ ಚಿಕ್ಕತೋಳೂರು ಗ್ರಾಮದಲ್ಲಿ ಎತ್ತೊಂದು ಸಿಡಿಲಿನ ಹೊಡೆತದಿಂದ ಅಸುನೀಗಿದೆ.
ತಡೆಗೋಡೆ ಹಾನಿ: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಒಳಚರಂಡಿ ಕಾಮಗಾರಿಯ ಪರಿಣಾಮ ಅಲ್ಲಲ್ಲಿ ರಸ್ತೆಗಳು ಹಾನಿಗೊಂಡಿದ್ದರೆ, ನಗರಸಭಾ ಸದಸ್ಯೆ ಅನಿತಾ ಪೂವಯ್ಯ ಅವರ ಮನೆಯ ತಡೆಗೋಡೆಯು ಮಳೆ ನೀರು ನುಗ್ಗಿ ಕುಸಿಯುವದ ರೊಂದಿಗೆ ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ಇಲ್ಲಿನ ಮಾರುಕಟ್ಟೆ ಸಂಕೀರ್ಣದಲ್ಲಿ ನೀರು ನುಗ್ಗಿದ ಪರಿಣಾಮ ಜಲಾವೃತ ಗೊಂಡು ನೀರು ಹೋರ ಹೋಗದೆ ಕೆರೆಯಂತೆ ಗೋಚರಿಸಿತು. ತರಾತುರಿಯಲ್ಲಿ ಉದ್ಘಾಟನೆಗೆ ಸಜ್ಜುಗೊಳ್ಳುತ್ತಿರುವ ಈ ನೂತನ ಮಾರುಕಟ್ಟೆ ಸಂಕೀರ್ಣ ಮುಂದೆ ಮುಂಗಾರುವಿನಲ್ಲಿ ಸಾಕಷ್ಟು ತೊಂದರೆಗೆ ವರ್ತಕರನ್ನು ನೂಕುವಂತಾಗಿದೆ. ದೂರದೃಷ್ಟಿಯಿಲ್ಲದ ಕಾಮಗಾರಿ ಭವಿಷ್ಯದಲ್ಲಿ ಸಮಸ್ಯೆ ಸೃಷ್ಟಿಸಲಿದ್ದು, ಸಂಬಂಧಪಟ್ಟವರು ಇತ್ತ ಗಮನ ಹರಿಸುವಂತೆ ಸ್ಥಳೀಯ ವರ್ತಕರು ಆಗ್ರಹಿಸಿದ್ದಾರೆ.
ಕಂಗಾಲಾದ ದಾರಿ ಹೋಕರು: ಮೇಕೇರಿ ಗ್ರಾ.ಪಂ. ವ್ಯಾಪ್ತಿಯ ಬಿಳಿಗೇರಿ ಗ್ರಾಮದ ಬಸ್ ತಂಗುದಾಣದ ಸೀಟು ಗಾಳಿ-ಮಳೆಯ ರಭಸಕ್ಕೆ ಸುಮಾರು 100 ಮೀಟರ್ ದೂರ ಎಸೆಯ ಲ್ಪಟ್ಟಿದ್ದು, ಮೇಲ್ಛಾವಣಿ ಹಾನಿಗೊಂಡಿದೆ. ತಂಗುದಾಣದ ಗೋಡೆಗಳು ಕುಸಿದಿವೆ. ಕಗ್ಗೋಡ್ಲು ಬಳಿ ರಸ್ತೆಯ ಅಲ್ಲಲ್ಲಿ ನಾಲ್ಕಾರು ಮರಗಳು ಬಿದ್ದು ವಾಹನಗಳ ಸಂಚಾರ ಕೆಲವು ಸಮಯ ಅಸ್ತವ್ಯಸ್ಥಗೊಂಡಿತು. ವಾಹನಗಳ ಚಾಲಕ-ಮಾಲೀಕರು, ದಾರಿ ಹೋಕರು ಕಂಗಾಲಾಗಿದ್ದರು.
ಮನೆಗಳಿಗೆ ಹಾನಿ: ಹಾಕತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮುರುಗೇಶ ಎಂಬವರ ಮನೆಗೆ ಮಳೆಯಿಂದ ಹಾನಿಯಾಗಿದ್ದು, ಅಂದಾಜು ರೂ. 50 ಸಾವಿರ ನಷ್ಟದ ಅಂದಾಜು ಮಾಡಲಾಗಿದೆ. ಮೇಕೇರಿ ಗ್ರಾ.ಪಂ. ವ್ಯಾಪ್ತಿಯ ಬಿಳಿಗೇರಿ ನಿವಾಸಿಗಳಾದ ಹ್ಯಾರೀಸ್, ರಶಿದಾ, ಮೊೈದು, ಹನೀಫ್ ಮೊದಲಾದವರ ಮನೆಗಳಿಗೆ ಹಾನಿಯಾಗಿದ್ದು, ಕಂದಾಯ ಸಿಬ್ಬಂದಿ ನಷ್ಟದ ಸಮೀಕ್ಷೆ ಕೈಗೊಂಡಿದ್ದಾರೆ.
ಕೋಡಂಬೂರು: ಕೋಡಂ ಬೂರು ಗ್ರಾಮದಲ್ಲಿ ಸುಮಾರು ಅರ್ಧ ಶತಮಾನದ ಸೇತುವೆ ನಿನ್ನೆಯ ಮಳೆಯಿಂದ ಹಾನಿಗೊಂಡು ಅಲ್ಲಿನ ಚೇನಂಡ, ಪಾಂಡಂಡ ಹಾಗೂ ಮಚ್ಚಾರಂಡ ಕುಟುಂಬಗಳಿಗೆ ತೆರಳಲು ಸಮಸ್ಯೆ ಎದುರಾಗಿದೆ. ಕಗ್ಗೋಡ್ಲು ಬಳಿ ಕೃಷಿ ಭೂಮಿಯಲ್ಲಿ ನೇಂದ್ರ ಬಾಳೆಯ ಫಸಲು ಸಹಿತ ತೋಟವೊಂದು ಸಂಪೂರ್ಣ ನೆಲಕಚ್ಚಿರುವ ದೃಶ್ಯ ಎದುರಾಗಿದೆ. ನಷ್ಟದ ಅಂದಾಜು ಮೊತ್ತ ತಿಳಿದಿಲ್ಲ.
ಕೂಡಿಗೆ: ಕೂಡಿಗೆ ವ್ಯಾಪ್ತಿಯಲ್ಲಿ ಆರು ವಿದ್ಯುತ್ ಕಂಬಗಳು ಮುರಿದು ಸಂಪರ್ಕ ಕಡಿತಗೊಂಡು ಗ್ರಾಮೀಣ ನಿವಾಸಿಗಳಾದ ಮದಲಾಪುರ, ಸೀಗೆಹೊಸೂರು, ಕೂಡಿಗೆಯ ಅಲ್ಲಲ್ಲಿ ಕತ್ತಲೆ ಎದುರಾಗಿದ್ದು, ಬಿದ್ದಿರುವ ವಿದ್ಯುತ್ ಕಂಬ, ಮರಗಳನ್ನು ತೆರವುಗೊಳಿಸಲು ಚೆಸ್ಕಾಂ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಬ್ಯಾಡಗೊಟ್ಟ ಸಮುದಾಯ ಭವನಕ್ಕೂ ಹಾನಿಯಾಗಿದೆ.
ಎತ್ತು ಸಾವು: ದೊಡ್ಡಮಳ್ತೆ ವ್ಯಾಪ್ತಿಯ ಚಿಕ್ಕತೋಳೂರು ಗ್ರಾಮದ ರೈತ ಲಿಂಗಪ್ಪ ಎಂಬವರಿಗೆ ಸೇರಿದ ಎತ್ತು ಸಿಡಿಲು ಬಡಿದ ಪರಿಣಾಮ ಅಸುನೀಗಿದ್ದು, ಅಂದಾಜು ರೂ. 25 ಸಾವಿರ ನಷ್ಟದ ಅಂದಾಜು ಮಾಡಲಾಗಿದೆ. ಕಂದಾಯ ಸಿಬ್ಬಂದಿ ಮಹಜರು ಕೈಗೊಂಡಿದ್ದಾರೆ. ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಕುಡಿಗಾಣ ಹಾಗೂ ಇತರೆಡೆಗಳಲ್ಲಿ ತರಕಾರಿ ತೋಟಗಳಿಗೆ ಹಾನಿಯಾಗಿವೆ.
ಕರಿಕೆ ಕತ್ತಲು: ಕರಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಗಾಳಿಮಳೆಯ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡು, ತೆಂಗು, ಅಡಿಕೆ, ಗೇರು ಫಸಲು ಹಾನಿ ಗೊಂಡಿದೆ. ಅಕಾಲಿಕ ಮಳೆಯಿಂದ ಬಿಸಿಲಿನ ಧಗೆಯೊಂದಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿದಂತಾಗಿದೆ ಎಂದು ಕೆಲವರು ಸಮಾಧಾನ ವ್ಯಕ್ತಪಡಿಸಿದ್ದಾರೆ.
(ಮೊದಲ ಪುಟದಿಂದ) ಕರಿಕೆಯ ನಿವಾಸಿ ಮಾಧವನ್ ನಾಯರ್ ಎಂಬವರ ಮನೆಗೆ ಹಾನಿಯಾಗಿದೆ.
ನಾಪೋಕ್ಲು: ನಾಪೋಕ್ಲು, ಕುಂಜಿಲ, ನೆಲಜಿ, ಕೊಳಕೇರಿ, ಕಕ್ಕಬೆ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಈ ವ್ಯಾಪ್ತಿಯಲ್ಲಿ ಸುಮಾರು ಎರಡು ಗಂಟೆ ನಿರಂತರ ಮಳೆಯೊಂದಿಗೆ ಭುವಿ ತಂಪಾಗಿದೆ. ಮೂರ್ನಾಡು ಗ್ರಾ.ಪಂ. ವ್ಯಾಪ್ತಿಯ ಕಾಂತೂರು ನಿವಾಸಿ ಲೀಲಾವತಿ ಎಂಬವರ ಮನೆಗೂ ಹಾನಿ ಉಂಟಾಗಿದೆ.
ಅಲ್ಲಲ್ಲಿ ಮಳೆ: ಜಿಲ್ಲೆಯ ಕುಶಾಲನಗರ, ಸಿದ್ದಾಪುರ, ಪಾಲಿಬೆಟ್ಟ, ಶ್ರೀಮಂಗಲ, ಬಾಡಗರಕೇರಿ, ಬಿರುನಾಣಿ, ಕಾನೂರು, ಕೊಟ್ಟಗೇರಿ, ಪಾಡಿಶ್ರೀ ಇಗ್ಗುತ್ತಪ್ಪ ಸನ್ನಿಧಿ ಸಹಿತ ತೀರ್ಥ ಕ್ಷೇತ್ರ ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿಯೂ ಉತ್ತಮ ಮಳೆಯಾಗಿದೆ. ಈ ವ್ಯಾಪ್ತಿಯಲ್ಲಿ ಯಾವದೇ ಅಪಾಯ ಎದುರಾದ ಕುರಿತು ಮಾಹಿತಿ ಲಭಿಸಿಲ್ಲ.
ಮೂರು ದಿನಗಳಿಂದ ಮಳೆ
ಸೋಮವಾರಪೇಟೆ: ಸೋಮವಾರಪೇಟೆ ಭಾಗಕ್ಕೆ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಯುಗಾದಿ ಹಬ್ಬದಂದು ಭಾರೀ ವರ್ಷಾಧಾರೆಯಾಯಿತು.