ಮಡಿಕೇರಿ: ಮೊಬೈಲ್ ಬಿಟ್ಟು, ಪುಸ್ತಕ ಓದಿದರೆ ಜೀವನ ಪೂರ್ತಿ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂದು ಸಾಹಿತಿ ನಾಗೇಶ್ ಕಾಲೂರು ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪುಸ್ತಕದ ಪಾಠ ಒಂದು ಹಂತದವರೆಗೆ, ಆದರೆ ನಮಗೆ ಬೇಕಿರುವದು ಬದುಕಿನ ಪಾಠ. ವಿದ್ಯಾಬ್ಯಾಸ ಎಲ್ಲಾ ಸಂದರ್ಭದಲ್ಲೂ ಬರುವದಿಲ್ಲ. ಬದುಕಿನ ಶಿಕ್ಷಣ ಕಲಿತಾಗ ಮಾತ್ರ ಬದುಕಿಗೆ ಮೌಲ್ಯ ದೊರೆಯುತ್ತದೆ ಎಂದು ಸಾಹಿತಿ ನಾಗೇಶ್ ಕಾಲೂರು ಹೇಳಿದರು.
ಮನುಷ್ಯತ್ವ ಇಲ್ಲದ ಶಿಕ್ಷಣಕ್ಕೆ ಕಿಂಚಿತ್ತು ಬೆಲೆಯಿಲ್ಲ, ಅಹಂಕಾರದಿಂದ ಮೆರೆಯದೆ ವಿದ್ಯಾರ್ಥಿಗಳು ಮಾನವೀಯ ಮೌಲ್ಯವಿರುವ ಶಿಕ್ಷಣ ಕಲಿಯಬೇಕು ಎಂದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಸಿ. ಜೆನ್ನಿಫರ್ ಲೋಲಿಟ ಮಾತನಾಡಿ, ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಇರುವ ಸಮಯವನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೇರಬೇಕೆಂದರು.
ಕೈಗಾರಿಕೋದ್ಯಮಿ ಸುಕೀಶ್ ಚಂದ್ರಪ್ಪ ಮಾತನಾಡಿ, ಮೌಲ್ಯಯುತ ಶಿಕ್ಷಣಕ್ಕೆ ಪೋಷಕರ ಪಾತ್ರ ಬಹಳ ಮುಖ್ಯ. ಫೇಸ್‍ಪುಕ್, ವ್ಯಾಟ್ಸಪ್ ಇವುಗಳನ್ನು ಬಿಟ್ಟು ಶಿಕ್ಷಣದ ಕಡೆ ಹೆಚ್ಚು ಒತ್ತು ಕೊಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕ ಸತೀಶ್ ಎನ್.ಪಿ., ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ ನಮೀತಾ, ಅರ್ಥಶಾಸ್ತ್ರ ವಿಭಾಗದ ಮಹೇಶ್, ಪ್ರಾಧ್ಯಾಪಕ ದಾಮೋದರ್, ಹರಿಣಿ, ಸರಸ್ವತಿ, ವಿದ್ಯಾರ್ಥಿ ಸಮಿತಿಯ ಪದಾಧಿಕಾರಿಗಳಾದ ಕಾವ್ಯಶ್ರೀ ಟಿ.ಎಲ್., ಹರ್ಷಿತಾ ಬಿ.ಆರ್., ಕುಸುಮಿತ ಕೆ.ಕೆ., ರಾಧಿಕಾ ಬಿ.ಪಿ. ತಶ್ಮಿತ ಬಿ.ಆರ್., ಅರ್ಪಿತಾ ರೈ ಬಿ.ಎಸ್. ಇತರರು ಇದ್ದರು.
ಶಾರದ ಪೂಜೆ-ಬೀಳ್ಕೊಡುಗೆ
ಮಡಿಕೇರಿ: ವಿದ್ಯಾರ್ಥಿಗಳು ಪೋಷಕರು ಮತ್ತು ಗುರುಗಳಿಗೆ ಗೌರವ ಸೂಚಿಸುವದರ ಮೂಲಕ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಹೇಳಿದರು.
ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಶಾರದ ಪೂಜೆ ಮತ್ತು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗೂ ಸಾಧನೆಯ ದಿಕ್ಕಲ್ಲಿ ಸಾಗುವಾಗ ಹಲವಾರು ಎಡರು ತೊಡರುಗಳು ಬರುವದು ಸಹಜ. ಆದರೆ ಎದೆಗುಂದದೆ ತಮ್ಮ ಗುರಿಯತ್ತ ಮುನ್ನುಗ್ಗಿದರೆ ಯಶಸ್ಸು ಸಿಗುತ್ತದೆ ಎಂದರು.
ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಬೋದಸ್ವರೂಪನಂದ ಸ್ವಾಮೀಜಿ ಮಾತನಾಡಿ, ಪೋಷಕರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರಾರ್ಥನೆ ಮತ್ತು ಧ್ಯಾನದ ಮುಖಾಂತರ ಏಕಾಗ್ರತೆಯನ್ನು ಪಡೆದು ತಮ್ಮ ಗುರಿಯತ್ತ ಸಾಗಬೇಕಾಗಿದೆ ಎಂದರು.
ಕ್ರೀಡಾರತ್ನ ಪ್ರಶಸ್ತಿ ವಿಜೇತೆ ಈ ಶಾಲೆಯ ಹಳೆಯ ವಿದ್ಯಾರ್ಥಿನಿ ಕೆ.ಜೆ. ಯಶಸ್ವಿನಿಯವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ ಸ್ವಾಗತಿಸಿದರು. ಕೆ.ಆರ್. ರಮೇಶ್ ನಿರೂಪಿಸಿ, ಈ.ಬಿ. ಗಿರೀಶ್ ವಂದಿಸಿದರು.