ವೀರಾಜಪೇಟೆ, ಮಾ. 19: ವೀರಾಜಪೇಟೆಯ ಟೀಂ ಡ್ಯೂಡ್ಸ್ ವತಿಯಿಂದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕಬಡ್ಡಿಯ ಅಂತಿಮ ಪಂದ್ಯಾಟದಲ್ಲಿ ಇಲ್ಲಿನ ರಿಜೆನ್ಸಿ ತಂಡ ಗೆಲುವು ಸಾಧಿಸಿದ್ದು ಖಾಸಗಿ ಬಸ್ಸು ನಿಲ್ದಾಣದ ಭೈರವ ತಂಡ ಎರಡನೇ ಸ್ಥಾನ ಪಡೆಯಿತು.
ಪಂದ್ಯಾಟದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ ರಿಜೆನ್ಸಿ ತಂಡಕ್ಕೆ ರೂ20,000 ನಗದು, ಟ್ರೋಫಿ ಎರಡನೇ ಸ್ಥಾನ ಗಳಿಸಿದ ಭೈರವ ತಂಡಕ್ಕೆ ರೂ 15000, ಟ್ರೋಫಿ, ಮೂರನೇ ಸ್ಥಾನ ಗಳಿಸಿದ ಸುಬ್ರಮಣ್ಯದ ಕುಕ್ಕೆ ಸುಬ್ರಮಣ್ಯ ತಂಡಕ್ಕೆ ರೂ7000, ಟ್ರೋಫಿ, ಹಾಗೂ ಗುಡ್ಡೆಹೊಸೂರಿನ ಏಕಲವ್ಯ ತಂಡಕ್ಕೆ ರೂ 3000 ನಗದು ಟ್ರೋಫಿಯನ್ನು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳು ವಿತರಿಸಿದರು. ಪಂದ್ಯ ಶ್ರೇಷ್ಠ ಸಾಗರ್, ಅತ್ಯುತ್ತಮ ಕ್ಯಾಚರ್ ಸಂದೀಪ್ ಹಾಗೂ ಆಲ್‍ರೌಂಡರ್ ಯೂಸೂಪ್‍ಗೆ ಪ್ರತ್ಯೇಕ ಬಹುಮಾನಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಪ.ಪಂ. ಯ ಹಿರಿಯ ಸದಸ್ಯ ಎಸ್.ಎಚ್. ಮತೀನ್ , ಪಂಚಾಯಿತಿಯ ನಾಮ ನಿರ್ದೇಶನ ಸದಸ್ಯ ಮಹಮ್ಮದ್‍ರಾಫಿ, ಸ್ಥಾಯಿ ಸಮಿತಿ ಅಧ್ಯಕ್ಷ ರಚನ್‍ಮೇದಪ್ಪ, ಬೆಂಗಳೂರಿನ ಕಾಂತಿ ಸಂಘಟನೆಯ ತುಳಸಿರಾಂ, ಬಿ.ಜೆ. ಬೋಪಣ್ಣ, ಮುರುಗೇಶ್ ಮತ್ತಿತರರು ಭಾಗವಹಿಸಿದ್ದರು.
ಇದೇ ಸಮಾರಂಭದಲ್ಲಿ ರಕ್ತ ಕ್ಯಾನ್ಸರ್‍ನಿಂದ ಬಳಲುತ್ತಿರುವ ಕೇರಳದ ಮಲಬಾರ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೀರಾಜಪೇಟೆ ಬಳಿಯ ನಿರ್ಮಲಗಿರಿಯ ನಿವಾಸಿ ಸಿ.ವಿ.ನಿತೀನ್ ಅವರ 6ವರ್ಷದ ಮಗಳು ನಿವೇದ್ಯಳ ಚಿಕಿತ್ಸೆಗಾಗಿ ರೂ 10,000 ಧನ ಸಹಾಯ ನೀಡಲಾಯಿತು.