ಮಡಿಕೇರಿ, ಮಾ. 16 : ಸರಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ; ನೆರೆಹೊರೆಯ ಸಮಾನ ಶಾಲೆಗಳನ್ನಾಗಿಸಲು ಪಣತೊಡುವ ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ನಿಟ್ಟಿನಲ್ಲಿ ಆಂದೋಲನ ರೂಪಿಸಲು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಸಮಿತಿ ತೀರ್ಮಾನಿಸಿದ್ದು, ಅದರಂತೆ ಕೊಡಗು ಜಿಲ್ಲೆಯಲ್ಲೂ ‘ನಮ್ಮ ಓಟು-ನಮ್ಮ ನಿರ್ಧಾರ’ ಆಂದೋಲನವನ್ನು ಆರಂಭಿಸಲಾಗಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಕೆ.ಎ.ನಾಗೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಾಲಾ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಹಲವು ದಶಕಗಳಿಂದ ಜನಪರ ಚಳುವಳಿಗಳು ನಡೆಯುತ್ತಿದ್ದರೂ, ಸ್ವತಂತ್ರ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಸರಕಾರಗಳು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು. ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕನ್ನು ತಿಳಿಗೊಳಿಸುವ ಮತ್ತು ಅಸಮಾನತೆ ಹಾಗೂ ತಾರತಮ್ಯದಿಂದ ಕೂಡಿದ ಶ್ರೇಣೀಕೃತ ಶಿಕ್ಷಣ ವ್ಯವಸ್ಥೆಯನ್ನು ಮುಂದುವರೆಸಲು ಪೂರಕವಾಗುವ ರೀತಿಯಲ್ಲಿ ಸರಕಾರಗಳು ಕೆಲಸ ನಿರ್ವಹಿಸುತ್ತಿದ್ದು, ಇದು ನಾಗರಿಕ ಸಮಾಜದ ಆತಂಕವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ ಎಂದು ಹೇಳಿದರು.
ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿ ಏಳು ವರ್ಷಗಳು ಕಳೆದಿದ್ದರೂ, ಬಹುತೇಕ ಸರಕಾರಿ ಶಾಲೆಗಳ ಸ್ಥಿತಿಗತಿ ಹಾಗೆಯೇ ಮುಂದುವರಿದಿದೆ. 2010-11ರಲ್ಲಿ ರಾಜ್ಯದಲ್ಲಿದ್ದ 23,109 ಕಿರಿಯ ಮತ್ತು 22568 ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾದ ಬಳಿಕ 2016-17ನೇ ಸಾಲಿನಲ್ಲಿ ಕ್ರಮವಾಗಿ 21,441 ಮತ್ತು 22454ಕ್ಕೆ ಇಳಿದಿದ್ದು, ಈ ಕಾಯ್ದೆ ಜಾರಿಯಾದ ಬಳಿಕ ರಾಜ್ಯದಲ್ಲಿ 1668 ಕಿರಿಯ ಮತ್ತು 114 ಹಿರಿಯ ಪ್ರಾಥಮಿಕ ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ. ಇದಲ್ಲದೆ ವಿದ್ಯಾರ್ಥಿಗಳ ಕೊರತೆಯ ನೆಪದಲ್ಲಿ ಸಾವಿರಾರು ಶಾಲೆಗಳನ್ನು ವಿಲೀನಗೊಳಿಸಲಾಗಿದೆ. ಆದರೆ ಇದೇ ಅವಧಿಯಲ್ಲಿ ಖಾಸಗಿ ಅನುದಾನ ರಹಿತ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ ಕ್ರಮವಾಗಿ 2761 ರಿಂದ 4279 ಹಾಗೂ 7491ರಿಂದ 9159ಕ್ಕೆ ಏರಿಕೆಯಾಗಿದೆ. ಅಂದರೆ ಕಳೆದ 7 ವರ್ಷಗಳಲ್ಲಿ 1778 ಸರಕಾರಿ ಶಾಲೆಗಳು ಮುಚ್ಚಿದ್ದರೆ, 3186 ಖಾಸಗಿ ಅನುದಾನ ರಹಿತ ಶಾಲೆಗಳು ಪ್ರಾರಂಭವಾಗಿದ್ದು, ಇದು ಸರಕಾರ ಕನ್ನಡ ಶಾಲೆಗಳ ಬಗ್ಗೆ ತೋರಿರುವ ಅನಾದರಕ್ಕೆ ಉದಾಹರಣೆಯಾಗಿದೆ ಎಂದು ನಾಗೇಶ್ ಟೀಕಿಸಿದರು.
ವೇದಿಕೆಯ ಮಡಿಕೇರಿ ತಾಲೂಕು ಅಧ್ಯಕ್ಷ ದೇವಂಗೋಡಿ ಸಿ.ರಾಮಚಂದ್ರ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಕ್ಕೇ ಮೊದಲ ಆದ್ಯತೆ ನೀಡಬೇಕು. ಕೇರಳದಲ್ಲಿ ಶೇ.90ರಷ್ಟು ಮಾತೃಭಾಷೆಯಲ್ಲೇ ಶಾಲೆಗಳಿದ್ದು, ಕರ್ನಾಟಕದಲ್ಲಿ ಶೇ. 60ಕ್ಕೂ ಅಧಿಕ ಶಾಲೆಗಳು ಆಂಗ್ಲ ಭಾಷೆಯ ಶಾಲೆಗಳಾಗಿವೆ. ಶಿಕ್ಷಣದ ವ್ಯಾಪಾರೀಕರಣವನ್ನು ತಡೆಗಟ್ಟಿ ಎಲ್ಲಾ ಮಕ್ಕಳಿಗೂ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜೆ.ಬಿ.ಸಿದ್ದಲಿಂಗಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ನ್ಯಾನ್ಸಿ ಅಂತೋಣಿ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಟಿ.ಹೇಮಾವತಿ ಉಪಸ್ಥಿತರಿದ್ದರು.