ಮೂರ್ನಾಡು, ಮಾ. 16: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ ಎಂದು ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಸದಸ್ಯ ಮೂಡೇರ ಅಶೋಕ್ ಅಯ್ಯಪ್ಪ ಹೇಳಿದರು.

ಕೋಡಂಬೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಕೋಡಂಬೂರು ಗ್ರಾಮದ ಫಲಾನುಭವಿಗಳಿಗೆ ಪಂಚಾಯಿತಿ ನಿಧಿ ಅನುದಾನದಲ್ಲಿ ಉಚಿತವಾಗಿ ನೀಡಲಾದ ಸಿಂಟೆಕ್ಸ್ ಹಾಗೂ ವಾಹನ ಚಾಲನ ತರಬೇತಿ ಪರವಾನಿಗೆ ವಿತರಿಸಿ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಮೂರ್ನಾಡು ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬೇಸಿಗೆಯಲ್ಲಿ ಎದುರಾಗುತ್ತಿದೆ. ಪ್ರಸ್ತುತದಲ್ಲಿ ಉಪ್ಪುಗುಂಡಿಯಿಂದ ಕುಡಿಯುವ ನೀರು ಸರಬರಾಜುಗೊಳ್ಳುತ್ತಿದ್ದು, ಕುಡಿಯುವ ನೀರು ಬೇಸಿಗೆಯಲ್ಲಿ ಸಮರ್ಪಕವಾಗಿ ನಿವಾಸಿಗಳಿಗೆ ದೊರಕುತ್ತಿಲ್ಲ. ಕೇವಲ ಎರಡು ಕಿಲೋ ಮೀಟರ್ ಅಂತರದಲ್ಲಿರುವ ಉಪ್ಪುಗುಂಡಿಯಿಂದ ಆಗುತ್ತಿರುವ ನೀರು ಸರಬರಾಜಿನಲ್ಲಿ ಆಗಿಂದ್ದಾಗೆ ಸಮಸ್ಯೆಗಳು ಎದುರಾಗುತ್ತಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಾಗಿದೆ. ಉಪ್ಪುಗುಂಡಿಯಿಂದ ಮೂರ್ನಾಡು ನೀರು ಸರಬರಾಜು ಟ್ಯಾಂಕ್‍ವರೆಗೆ ಈಗಿರುವ ಸಣ್ಣ ಗಾತ್ರದ ಪೈಪ್‍ಲೈನ್‍ಗಳನ್ನು ತೆಗೆದು ದೊಡ್ಡ ಗಾತ್ರದ ನೂತನ ಪೈಪ್‍ಲೈನ್ ಅಳವಡಿಸಿ ಹೆಚ್ಚಿನ ಸಾಮಥ್ರ್ಯ ಹೊಂದಿರುವ ಮೋಟಾರ್ ಅಳವಡಿಸಿದರೆ ಬೇಸಿಗೆ ಕಾಲದಲ್ಲಿ ಕೂಡ ಪಟ್ಟಣಕ್ಕೆ ಪ್ರತಿದಿನ ನೀರು ಸಮರ್ಪಕವಾಗಿ ಪೂರೈಸಬಹು ದಾಗಿದೆ ಎಂದು ತಿಳಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಂದಿನ ದಿನಗಳಲ್ಲಿ ಇದರತ್ತ ಗಮನ ಹರಿಸುವಂತೆ ಮನವಿ ಮಾಡಿದರು.

ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಮಾತನಾಡಿ, ಮುಂದಿನ ಸಭೆಯಲ್ಲಿ ಕುಡಿಯುವ ನೀರಿನ ಉಪ್ಪುಗುಂಡಿ ಯೋಜನೆ ಕುರಿತು ಚರ್ಚಿಸಿ ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಸರಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ, ಅವುಗಳನ್ನು ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ 9 ಮಂದಿಗೆ ಸಿಂಟೆಕ್ಸ್ ಹಾಗೂ ಏಳು ಮಂದಿ ಫಲಾನುಭವಿಗಳಿಗೆ ವಾಹನ ಚಾಲನ ಪರವಾನಿಗೆ ವಿತರಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ವಿ. ಚೇತನ, ಗೀತಾ ಪಟ್ಟು, ರವಿ ಉಪಸ್ಥಿತರಿದ್ದರು.