ಮಡಿಕೇರಿ, ಮಾ. 16: ವಿಶ್ವದಾದ್ಯಂತ ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ‘ವಿಶ್ವ ರಂಗಭೂಮಿ ದಿನ’ ಆಚರಿಸಲಾಗುತ್ತಿದೆ. ವಿಶ್ವವಿಖ್ಯಾತ ನಾಟಕಕಾರ ಬ್ರೆಟೋಲ್ಡ್ ಬ್ರೆಕ್ಟ್ನ ನೆನಪಿಗಾಗಿ ಆಚರಿಸುತ್ತಿದ್ದ ದಿನವನ್ನು ನಂತರ ವಿಶ್ವ ರಂಗಭೂಮಿ ದಿನವನ್ನಾಗಿ ಘೋಷಿಸಲಾಯಿತು. ಈ ಸಂದರ್ಭ ವಿಶೇಷವಾಗಿ ನಾಟಕ ಪ್ರದರ್ಶನ, ವಿಚಾರ ಸಂಕಿರಣ ಜೊತೆಗೆ ರಂಗಭೂಮಿಯ ನಟ, ನಿರ್ದೇಶಕ, ರಂಗತಜ್ಞರು ಎಲ್ಲರೂ ಸೇರಿ ರಂಗಭೂಮಿಯ ಆಶಯಗಳ ಬಗ್ಗೆ ಚಿಂತನ-ಮಂಥನ ನಡೆಸುತ್ತಾರೆ.
ಕೊಡಗಿನಲ್ಲಿ ರಂಗಭೂಮಿ ಪ್ರತಿಷ್ಠಾನ ಸಂಸ್ಥೆ ವಿಶ್ವ ರಂಗಭೂಮಿ ದಿನವನ್ನು ಕಳೆದ ಕೆಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ. ಈ ಬಾರಿ ವೀರಾಜಪೇಟೆ ರೋಟರಿ ಸಂಸ್ಥೆ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದೊಂದಿಗೆ ತಾ. 28 ರಂದು ಸಂಜೆ 6 ಗಂಟೆಗೆ ರೋಟರಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ವರ್ಷ 2018ನ್ನು ಕೊಡಗಿನ ರಂಗಪಿತಾಮಹಾ ಹರದಾಸ ಅಪ್ಪಚ್ಚ ಕವಿಯ ವರ್ಷ ಎಂದು ಘೋಷಿಸಲಾಗಿದೆ. ದಿನದ ಮಹತ್ವವಾಗಿ ಕವಿಯ 150ನೇ ಜನ್ಮೋತ್ಸವ ನೆನಪಿಗೆ ‘ಅಮರ ಕಾವ್ಯ’ ಎಂಬ ಕವಿಯ ರಂಗಗೀತೆಗಳ ಕಾರ್ಯಕ್ರಮ ನಡೆಯಲಿದೆ. ರಂಗಭೂಮಿ ಪ್ರತಿಷ್ಠಾನ ರಂಗಪುರಸ್ಕಾರಕ್ಕೆ ಈ ಬಾರಿ ಮೂವರು ರಂಗಕರ್ಮಿಗಳನ್ನು ಆಯ್ಕೆ ಮಾಡಿದೆ. ಕೊಡವ ರಂಗಭೂಮಿಯ 70ರ ದಶಕದ ಹಿರಿಯ ನಟ ಗುಮ್ಮಟಿರ ಸೋಮಯ್ಯ, ಕೊಡಗಿನ ಗ್ರಾಮಾಂತರ ಪ್ರದೇಶದ ಪೌರಾಣಿಕ ನಾಟಕಗಳ ಹಿರಿಯ ನಿರ್ದೇಶಕ ಹಾರ್ಮೊನಿಯಂ ಮೇಸ್ಟ್ರು ಎಂ.ಆರ್. ಚಂದ್ರಶೇಕರ್, ಸೃಷ್ಟಿ ನಾಟಕ ಸಂಸ್ಥೆಯ ಕ್ರೀಯಾಶೀಲ ನಟ, ಜಾನಪದ ಕಲಾವಿದ ಕಾಂಡೆರ ಡಾನ್ ಕುಶಾಲಪ್ಪ ಇವರುಗಳಿಗೆ ರಂಗ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದು ರಂಗಭೂಮಿ ಪ್ರತಿಷ್ಠಾನದ ಸಂಚಾಲಕಿ ಅನಿತಾ ಕಾರ್ಯಪ್ಪ ತಿಳಿಸಿದ್ದಾರೆ.