*ಗೋಣಿಕೊಪ್ಪಲು, ಮಾ. 16: ಶತಮಾನಗಳಿಂದ ಕತ್ತಲೆಯಲ್ಲೇ ದಿನ ಕಳೆಯುತ್ತಿದ್ದ ಕಾರೆಹಡ್ಲು ಹಾಡಿಗೆ ಹೊಸ ಬೆಳಕು ಮೂಡಿದೆ. ಆಧುನೀಕೃತ ಯಂತ್ರ ಯುಗದಲ್ಲಿ ಕನಿಷ್ಟ ಮೂಲಭೂತ ಸೌಲಭ್ಯದಿಂದ ವಂಚಿತರಾದ ಈ ಕುಟುಂಬಗಳು ಸದ್ಯದಲ್ಲಿಯೇ ಬೆಳಕಿನ ಭಾಗ್ಯ ಪಡೆದು ಸಂತಸ ಪಡಲಿದ್ದಾರೆ. ಈ ವರ್ಷದ ಯುಗಾದಿ ಹಬ್ಬದ ಉಡುಗೊರೆಯಾಗಿ ವಿದ್ಯುತ್ ಬೆಳಕಿನ ಭಾಗ್ಯ ದೊರೆಯಲಿದೆ. (ಮೊದಲ ಪುಟದಿಂದ) ತಿತಿಮತಿ ದೇವರಪುರ ಗ್ರಾ.ಪಂ. ವ್ಯಾಪ್ತಿಯ ಕಾರೆಹಡ್ಲು ಹಾಡಿಯಲ್ಲಿ ಸುಮಾರು 43 ಕುಟುಂಬಗಳು ವಾಸಿಸುತ್ತಿವೆÉ. ಸ್ವಾತಂತ್ರ್ಯ ಬಂದು 71 ವರ್ಷಗಳು ಕಳೆದರೂ ಇಲ್ಲಿನ ನಿವಾಸಿಗಳು ವಿದ್ಯುತ್ ಬೆಳಕಿನ ಸೌಭಾಗ್ಯದಿಂದ ವಂಚಿತರಾಗಿದ್ದರು. ಆನೆ ಹಾವಳಿ ಮಿತಿ ಮೀರಿದ್ದು, ಜೋಪಡಿಯಲ್ಲಿ ರಾತ್ರಿ ನಿದ್ರಿಸುವದಕ್ಕೂ ಸಾಧ್ಯವಾಗದ ಪರಿಸ್ಥಿತಿ ಇತ್ತು. ಮನೆಯ ಗೋಡೆಗಳಿಗೆ ಆನೆಗಳು ಹಾನಿ ಉಂಟುಮಾಡಿ ಕೆಲವು ಮನೆಗಳು ಬೀಳುವ ಸ್ಥಿತಿಯಲ್ಲಿಯೂ ಇವೆ. ರಾತ್ರಿ ಕಾಡುಪ್ರಾಣಿಗಳ ಉಪಟಳಗಳ ಭಯದಲ್ಲೇ ಜೀವನ ನಡೆಸುತ್ತಿದ್ದ ಇವರಿಗೆ ಕೊನೆಗೂ ಬೆಳಕಿನಲ್ಲಿ ಬದುಕುವ ಹಕ್ಕು ಸಿಕ್ಕಿದೆ. ಕೇಂದ್ರ ಸರ್ಕಾರದ ದೀನ್ ದಯಾಳ್ ಉಪಾಧ್ಯಾಯ ವಿದ್ಯುತ್ ಯೋಜನೆಯಡಿ ಪ್ರತಿ ಮನೆಗಳಿಗೂ ವಿದ್ಯುತ್ ಕಲ್ಪಿಸಲಾಗುತ್ತಿದೆ. ಒಂದು ಮನೆಗೆ ಒಂದು ಬಲ್ಬ್ ಮತ್ತು ಸಾಕೆಟ್, ಮೀಟರ್‍ಗಳನ್ನು ಅಳವಡಿಸ ಲಾಗುತ್ತಿದೆ. ಈಗಾಗಲೇ ಹಾಡಿಗೆ ವಿದ್ಯುತ್ ಸಂಪರ್ಕ ಬೆಸೆಯಲು ತಿತಿಮತಿ ಮುಖ್ಯರಸ್ತೆಯಿಂದ 35 ಕಂಬಗಳನ್ನು ಅಳವಡಿಸಲಾಗಿದೆ. ಉಚಿತವಾಗಿ ವಿದ್ಯುತ್ ಸಂಪರ್ಕ ನೀಡುವ ಸರ್ಕಾರ ಅದರ ಬಿಲ್ಲ್ ಅನ್ನು ಅವರೇ ಕಟ್ಟಬೇಕೆಂಬ ನಿಯಮವನ್ನು ನೀಡಿದೆ. ಒಟ್ಟಾರೆ ಕತ್ತಲೆಯಲ್ಲೇ ರಾತ್ರಿ ದಿನ ಕಳೆಯುತ್ತಿದ್ದ ಹಾಡಿಯ ನಿವಾಸಿಗಳು ವಿದ್ಯುತ್ ಬೆಳಕಿನಿಂದ ನಿಶ್ಚಿಂತೆಯಿಂದ ನಿದ್ರಿಸಲು ಸಾಧ್ಯವಾಗುತ್ತಿದೆ. ಕೇಂದ್ರ ಸರ್ಕಾರದ ಈ ಯೋಜನೆಯು ಶಾಸಕ ಕೆ.ಜಿ. ಬೋಪಯ್ಯ ಅವರ ಕಾಳಜಿಯಿಂದ ಕಾರೆಹಡ್ಲು ಹಾಡಿಗೆ ಅನುಷ್ಠಾನಗೊಳ್ಳುವಂತಾಗಿದೆ.
ಹಲವು ವರ್ಷಗಳ ಮನವಿಗೆ ಕೊನೆಗೂ ಸ್ಪಂದನ ದೊರೆತಿದ್ದು, ಹೊಸ ಉತ್ಸಾಹ ಹಾಡಿ ನಿವಾಸಿಗಳಲ್ಲಿ ತುಂಬಿಕೊಂಡಿದೆ. ಹಾಡಿ ಸನಿಹ ತಮ್ಮ ಬದುಕು ಸಾಗಿಸಲು ಬುಡಕಟ್ಟು ಮಂದಿಗೆ ಗದ್ದೆಯಿದ್ದರೂ ನಿಷ್ಪ್ರಯೋಜಕವಾಗಿದೆ. ಗದ್ದೆಯಲ್ಲಿ ಬೆಳೆ ಬೆಳೆದು ತಮ್ಮ ಕುಟುಂಬ ನಿರ್ವಹಿಸಲು ಈ ಹಿಂದೆ ನಡೆಸಿದ ಪ್ರಯತ್ನಗಳು ವಿಫಲವಾಗಿದೆ. ಏಕೆಂದರೆ, ನಿರಂತರ ಆನೆ ಧಾಳಿಯಿಂದಾಗಿ ಈ ಮಂದಿ ಬೆಳೆದ ಬೆಳೆ ನಾಶಗೊಂಡು ತತ್ತರಿಸಿ ಹೋಗಿದ್ದರು. ಆ ಬಳಿಕ ಕೆಲವರು ಸನಿಹದ ತೋಟಗಳಲ್ಲಿ ಕಾರ್ಮಿಕ ರಾಗಿ ದುಡಿದು ಬದುಕುತ್ತಿದ್ದಾರೆ. ಇನ್ನು ಕೆಲವರು ಚಾಲಕ ಹುದ್ದೆ ಮತ್ತಿತರ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆನ್ನಲಾಗಿದೆ.
ಬೆಳಕಿನ ಭಾಗ್ಯದ ಬಗ್ಗೆ “ಶಕಿ”್ತಯೊಂದಿಗೆ ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ಮನೆಯಪಂಡ ಮಹೇಶ್ ಹಾಗೂ ಆರ್.ಎಂ.ಸಿ. ಸದಸ್ಯ ಮೋಹನ್ ರಾಜ್ ಸರ್ಕಾರದ ಪ್ರತಿ ಯೋಜನೆಗಳು ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದವರಿಗೆ ದೊರಕುವಂತಾಗಬೇಕು. ಹಾಡಿಯಲ್ಲಿ ವಾಸಿಸುವ ನಿವಾಸಿಗಳಿಂದಲೇ ಕಾಡುಗಳು ಉಳಿದುಕೊಂಡಿದೆ ಎಂದು ಹೇಳಿದರು.
- ಎನ್.ಎನ್. ದಿನೇಶ್