ಗೋಣಿಕೊಪ್ಪಲು, ಮಾ. 17. ಕೊಡಗು ಜಿಲ್ಲಾ ರೈತ ಸಂಘದ ವತಿಯಿಂದ ಪೊನ್ನಂಪೇಟೆ ಅರಣ್ಯ ಇಲಾಖೆಯ ಕಚೇರಿಗೆ ದಿಢೀರ್ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾ ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್, ಕಾರ್ಯದರ್ಶಿ ಕಳ್ಳಿಚಂಡ ಧನು ಮುಂದಾಳತ್ವ ದಲ್ಲಿ ಪ್ರತಿಭಟನೆ ನಡೆಯಿತು.ದ.ಕೊಡಗಿನಲ್ಲಿ ನಿರಂತರ ಹುಲಿ ಹಾವಳಿಯಿಂದ ರೈತರ ಹಸುಗಳು ಸಾಯುತ್ತಿದ್ದು, ಇಲಾಖೆಯ ಅಧಿಕಾರಿಗಳು ಪರಿಹಾರ ವಿತರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.ಎಸಿಎಫ್ ಶ್ರೀಪತಿಯವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು. ನೊಂದ ರೈತ ಕೊಟ್ಟಗೇರಿಯ ಮಾಪಂಗಡ ಮುದ್ದಯ್ಯನವರಿಗೆ ಪರಿಹಾರ ನೀಡಬೇಕೆಂದು ಪ್ರತಿಭಟನೆಕಾರರು ಒತ್ತಾಯಿಸಿದರು.

ಜಿಲ್ಲಾ ರೈತ ಮುಖಂಡರು ಹಸು ಕಳೆದುಕೊಂಡ ಕೊಟ್ಟಗೇರಿಯ ರೈತನ ಮನೆಗೆ ತೆರಳಿ ಸಾಂತ್ವನ ಹೇಳಿದರು. ಮನೆಯ ಸಮೀಪದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹುಲಿ ಸೆರೆ ಹಿಡಿಯಲು ಬೋನನ್ನು ಅಳವಡಿಸಿದ್ದಾರೆ.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ, ಮಚ್ಚಮಾಡ ರಂಜಿ, ಬೋಡಂಗಡ ಕಾರ್ಯಪ್ಪ, ಮಾಪಂಗಡ ಮುದ್ದಯ್ಯ, ಚಂಗುಲಂಡ ರಾಜಪ್ಪ, ಐಯ್ಯಮಾಡ ಹ್ಯಾರಿ ಸೋಮೇಶ್, ಬೊಳ್ಳೆರ ಪಟ್ಟು, ಬಾಜಮಾಡ ಭವಿಕುಮಾರ್ ಮುಂತಾದವರು ಹಾಜರಿದ್ದರು.