ಗೋಣಿಕೊಪ್ಪಲು, ಮಾ. 16 : ಮುಂದಿನ ಪೀಳಿಗೆಗೆ ಕೊಡಗಿನ ಪರಿಸರ ಉಳಿಸುವ ನಿಟ್ಟಿನಲ್ಲಿ ಅರಣ್ಯ ಅಭಿವೃದ್ಧಿ ನಿಗಮದಿಂದ ಉಚಿತ ಗ್ಯಾಸ್ ಕಿಟ್‍ಗಳನ್ನು ವಿತರಿಸುತ್ತಿದ್ದು, ಇದರಿಂದ ಮರಗಳ ಹನನ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಈ ಮೂಲಕ ಸ್ವಚ್ಛಂದ ಕೊಡಗು ನಿರ್ಮಾಣ ಮಾಡುವ ಗುರಿ ಹೊಂದಿದೆ ಎಂದು ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಹೇಳಿದರು.

ನಿಗಮದ ವತಿಯಿಂದ ಪೊನ್ನಂಪೇಟೆ ಬ್ಲಾಕ್‍ನ 21 ವಲಯಗಳಿಗೆ 250 ಕುಟುಂಬಗಳಿಗೆ ಉಚಿತ ಗ್ಯಾಸ್ ಕಿಟ್‍ಗಳನ್ನು ಪೊನ್ನಂಪೇಟೆ ಮಹಿಳಾ ಸಮಾಜದಲ್ಲಿ ವಿತರಿಸಿ ಮಾತನಾಡಿದ ಅವರು, ಈಗಾಗಲೇ ವೀರಾಜಪೇಟೆ ತಾಲೂಕಿನಲ್ಲಿ ಮೊದಲನೇ ಹಂತದಲ್ಲಿ 520 ಕುಟುಂಬಗಳಿಗೆ ಗ್ಯಾಸ್‍ಕಿಟ್‍ಗಳನ್ನು ವಿತರಿಸಲಾಗಿದೆ. ಜತೆಗೆ ಅರಣ್ಯದಂಚಿನ ಹಾಗೂ ವಿದ್ಯುತ್ ವಂಚಿತ ಮನೆಗಳಿಗೆ ಪದ್ಮಿನಿ ಪೊನ್ನಪ್ಪ ಹಾಗೂ ಸಚಿನ್ ತೆಂಡೂಲ್ಕರ್ ಫೌಂಡೇಶನ್ ಮೂಲಕ 1500 ಸೋಲರ್ ಲ್ಯಾಂಪ್‍ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಇದನ್ನು ಪಲಾನುಭವಿಗಳು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಇದೇ ರೀತಿ 2ನೇ ಹಂತದಲ್ಲಿ 700 ಕುಟುಂಬಗಳಿಗೆ ಗ್ಯಾಸ್ ಕಿಟ್ ನೀಡುವ ಗುರಿ ಹೊಂದಲಾಗಿದ್ದು ಈಗಾಗಲೇ ನಾಪೋಕ್ಲು ಬ್ಲಾಕ್‍ನಲ್ಲಿ 235 ಕುಟುಂಬಗಳಿಗೆ ಉಚಿತ ಗ್ಯಾಸ್ ಕಿಟ್‍ಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕುಟುಂಬಗಳಿಗೆ ಈ ಸೌಲಭ್ಯ ಒದಗಿಸಲಾಗುವದು. ಹೊಗೆ ಮುಕ್ತ ಕೊಡಗು, ಸೌದೆ ರಹಿತ ಅಡುಗೆ ಎಂಬ ಘೋಷ ವಾಕ್ಯದಲ್ಲಿ ಈ ಕಾರ್ಯಕ್ರಮ ರೂಪುಗೊಂಡಿದ್ದು ಮುಂದಿನ ಪೀಳಿಗೆಗೆ ಕೊಡಗಿನ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ನಿಗಮದಿಂದ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಇದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ. ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ನೀಡಿರುವ ರಾಜ್ಯ ಸರ್ಕಾರ ಜನಪರವಾಗಿದೆ. 94ಸಿ ಅಡಿಯಲ್ಲಿ ಜಿಲ್ಲೆಯ ಜನತೆಗೆ ಹಕ್ಕುಪತ್ರ ನೀಡಲಾಗಿದೆ. ರೈತಾಪಿ ವರ್ಗದ ಸಾಲಮನ್ನಾ ಮಾಡಿ ರೈತಪರ ನಿಲುವು ತೋರಿದೆ. ಜಿಲ್ಲೆಯ 2 ಕ್ಷೇತ್ರದ ಗೆಲುವಿಗೆ ಮತದಾರರ ಬೆಂಬಲ ಬೇಕು ಎಂದರು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ದರ್ಮಜ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಸರಾ ಚಂಗಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವಿನಯ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಕಡೇಮಾಡ ಕುಸುಮಾ ಜೋಯಪ್ಪ, ಖಾದಿ ನಿಗಮ ಮಂಡಳಿ ಸದಸ್ಯೆ ರೂಪ ಭೀಮಯ್ಯ, ಜಿ.ಪಂ ಸದಸ್ಯರುಗಳಾದ ಶ್ರೀಜಾ, ಪಂಕಜ, ತಾ.ಪಂ ಸದಸ್ಯರುಗಳಾದ ಆಶಾ ಪೂಣಚ್ಚ, ಆಶಾ ಜೇಮ್ಸ್, ಗೋಣಿಕೊಪ್ಪ ನಗರಾಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ, ಅರ್ವತ್ತೋಕ್ಲು ಗ್ರಾ.ಪಂ ಅಧ್ಯಕ್ಷ ಸುಗುಣ ಸೋಮಯ್ಯ, ತಿತಿಮತಿ ಗ್ರಾ.ಪಂ ಅಧ್ಯಕ್ಷ ಶಿವಕುಮಾರ್, ಪೊನ್ನಂಪೇಟೆ ಗ್ರಾ.ಪಂ ಅಧ್ಯಕ್ಷೆ ಸುಮಿತಾ ಗಣೇಶ್, ಹುದಿಕೇರಿ ಗ್ರಾ.ಪಂ ಅಧ್ಯಕ್ಷೆ ರೇಖಾ, ಕೃಷಿ ಘಟಕಾಧ್ಯಕ್ಷ ಮೋಹನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಿದೇರಿರ ನವೀನ್, ಕಾಂಗ್ರೆಸ್ ಮುಖಂಡ ಕೊಳ್ಳಿಮಾಡ ಪೊನ್ನಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕಾಡ್ಯಮಾಡ ಚೇತನ್, ಎ.ಜೆ ಬಾಬು ಇದ್ದರು.