ನಾಪೋಕ್ಲು, ಮಾ. 16: ನಾಪೋಕ್ಲು ಕಂದಾಯ ಇಲಾಖೆ ಯಲ್ಲಿನ ಸಿಬ್ಬಂದಿಗಳು ಬೇಜವಾಬ್ದಾರಿ ಯಿಂದ ವರ್ತಿಸುತ್ತಿದ್ದು ದಾಖಲೆಗಳು ಸಕಾಲದಲ್ಲಿ ಲಭ್ಯವಾಗುತ್ತಿಲ್ಲ. ಎಂದು ಗ್ರಾಮಸ್ಥರು ಆರೋಪಿಸಿದರು. ಸಮೀಪದ ಬಲ್ಲಮಾವಟಿ ಗ್ರಾಮಪಂಚಾಯಿತಿ ವತಿಯಿಂದ ಪಿಂಚಣಿದಾರರ ಸಂಘದ ಕಟ್ಟಡದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಗ್ರಾಮಸಭೆಯಲ್ಲಿ ಕಂದಾಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಆರೋಪ ವ್ಯಕ್ತಪಡಿಸಿದ ಗ್ರಾಮಸ್ಥರು ರೆವಿನ್ಯೂ ಅಧಿಕಾರಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.
ಆದಾಯ ದೃಢೀಕರಣ ಪತ್ರ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಖಾಸಗಿ ಕಂಪೆನಿಯೊಂದು ರಸ್ತೆ ಬದಿಯಲ್ಲಿ ಕೇಬಲ್‍ಗಳನ್ನು ಅಳವಡಿಸಲು ಗುಂಡಿಗಳನ್ನು ತೆಗೆಯುತ್ತಿದ್ದು ಸಮಸ್ಯೆಯುಂಟಾಗಿದೆ. ದೊಡ್ಡ ಪುಲಿಕೋಟು ಗ್ರಾಮದ ತಂಡ್ರ ಸೇತುವೆ ಬಳಿ ಆಳವಾದ ಗುಂಡಿಯನ್ನು ತೆಗೆದಿರುವದರಿಂದ ಸಮಸ್ಯೆ ಉಂಟಾಗಿದೆ. ಬೀದಿಗಳಿಗೆ ವಿದ್ಯುದ್ದೀಪ ಅಳವಡಿಸಲು ಕ್ರಮಕೈಗೊಳ್ಳಬೇಕು. ಮುಂತಾದ ಬೇಡಿಕೆಗಳನ್ನು ಗ್ರಾಮಸ್ಥರು ಸಭೆಯ ಮುಂದಿಟ್ಟರು. ಗ್ರಾಮಸ್ಥರ ಬೇಡಿಕೆಗಳಿಗೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಪ್ರತಿಕ್ರಿಯಿಸಿ ಗ್ರಾಮಪಂಚಾಯಿತಿ ವತಿಯಿಂದ ರಸ್ತೆ ಮತ್ತು ನೀರು ಪೂರೈಕೆಗೆ ಆದ್ಯತೆ ನೀಡಲಾಗಿದ್ದು ಅವುಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವದು ಎಂದರು.
ಗ್ರಾಮಪಂಚಾಯಿತಿ ವ್ಯಾಪ್ತಿಯ ಬಲ್ಲಮಾವಟಿ ಹಾಗೂ ನೆಲಜಿ ಗ್ರಾಮಗಳ ಶಾಲೆಗಳ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಅಂಗವಿಕಲರಿಗೆ 50000ರೂ. ವೆಚ್ಚದಲ್ಲಿ ಬ್ಯಾಗ್, ಕೊಡೆ, ನೋಟ್‍ಪುಸ್ತಕ, ಗಳನ್ನು ವಿತರಿಸಲಾಗುವದು ಎಂದರು. ಸಭೆಯಲ್ಲಿ ಪೇರೂರಿನ ಆನೆಟ್ಟಿಯ ಇಬ್ಬರು ಅಂಗವಿಕಲರಿಗೆ ಗಾಲಿ ಕುರ್ಚಿಗಳನ್ನು ಪಂಚಾಯಿತಿ ವತಿಯಿಂದ ವಿತರಿಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಉಪಾಧ್ಯಕ್ಷೆ ದೇವಕಿ, ಸದಸ್ಯರಾದ ಚಂಗೇಟಿರ ಸೋಮಣ್ಣ, ಬದ್ದಂಜೆಟ್ಟೀರ ದೇವಿದೇವಯ್ಯ, ಬೈರುಡ ಮುತ್ತಪ್ಪ, ಜಿಲ್ಲಾಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ತಾಲೂಕು ಪಂಚಾಯಿತಿ ಸದಸ್ಯೆ ಕೋಡಿಯಂಡ ಇಂದಿರಾಹರೀಶ್ ಪಾಲ್ಗೊಂಡಿದ್ದರು.
- ದುಗ್ಗಳ