ವೀರಾಜಪೇಟೆ, ಮಾ. 17: ಕಾಕೋಟುಪರಂಬು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಂಗಮರೂರು ಗ್ರಾಮಸ್ತರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪಂಚಾಯಿತಿ ಸರಕಾರದ ಅನುದಾನವನ್ನು ಸೂಕ್ತವಾಗಿ ಬಳಕೆ ಮಾಡುತ್ತಿಲ್ಲ ಎಂದು ಜೆಡಿಎಸ್ ಯುವ ಘಟಕದ ವೀರಾಜಪೇಟೆ ತಾಲೂಕು ಅಧ್ಯಕ್ಷ ಅಮ್ಮಂಡ ವಿವೇಕ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮದಲ್ಲಿ ಸಂಪರ್ಕ ಬೆಸೆಯುವ ಕಡಂಗಮರೂರು-ಕೆದಮುಳ್ಳುರು, ಕಾಕೋಟುಪರಂಬು-ಕಡಂಗ, ಕಾಕೋಟುಪರಂಬು ಬೆಳ್ಳುಮಾಡು ರಸ್ತೆಗಳು ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಮಳೆಗಾಲದಲ್ಲಿ ಕೆಲವು ಭಾಗಗಳಲ್ಲಿ ಒಂದೂವರೆ ಅಡಿಗೂ ಅಧಿಕ ನೀರು ರಸ್ತೆಯಲ್ಲಿ ನಿಲ್ಲುತ್ತದೆ. ಪಂಚಾಯಿತಿಯಿಂದ ಬಂದ ಅನುದಾನದಲ್ಲಿ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮನೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿಕೊಳ್ಳಲಾಗಿದೆ ಎಂದರು. ಕಡಂಗಮರೂರು ಜೌಕಿ ಹರಿಶ್ಚಂದ್ರ ಕಾಲೋನಿಯಲ್ಲಿ ಏಳೆಂಟು ಮನೆಗಳ ಗೋಡೆಗಳು ಸಂಪೂರ್ಣ ಕುಸಿದು ಬಿದ್ದಿದ್ದು ಜೋಪುಡಿಯಲ್ಲಿ ವಾಸಿಸುವ ಸ್ಥಿತಿ ಒದಗಿ ಬಂದಿದೆ. ಇದರಿಂದ ಪ್ರಾಣ ಹಾನಿಯಾಗುವ ಸಂಭವವೇ ಹೆಚ್ಚಾಗಿದೆ ಎಂದು ವಿವರಿಸಿದರು.

ತಾಲೂಕು ಸಮಿತಿ ಉಪಾಧ್ಯಕ್ಷ ಪಂದ್ಯಂಟ ರವಿ ಮಾದಪ್ಪ ಮಾತನಾಡಿ, ವೀರಾಜಪೇಟೆ ಶಾಸಕರಿಗೆ ಕಡಂಗ ಮರೂರು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆಯಾ ಎಂಬವದರ ಅರಿವಿಲ್ಲ. ಕಾಕೋಟುಪ ರಂಬು ಪಂಚಾಯಿತಿ ಗ್ರಾಮಸ್ಥರಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಬೇಜವಾಬ್ದಾರಿತನದಿಂದ ಮುಂದುವರೆದರೆ ಕಾಕೋಟುಪರಂಬು ಪಂಚಾಯಿತಿಗೆ ಬರುವ ಎಲ್ಲ ಗ್ರಾಮಸ್ಥರನ್ನು ಸಂಘಟಿಸಿ ಪಂಚಾಯಿತಿ ಕಚೇರಿ ಎದುರು ಸಧ್ಯದಲ್ಲಿಯೇ ಪ್ರತಿಭಟನೆ ನಡೆಸುವದು ಅನಿವಾರ್ಯ ಎಂದು ಹೇಳಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಮಂಡೆಪಂಡ ಮುತ್ತಪ್ಪ, ಕಡಂಗಮರೂರು ಕಾಕೋಟು ಪರಂಬು ಬೂತ್ ಅಧ್ಯಕ್ಷರಾದ ಮಂಡೆಪಂಡ ಮದನ್, ನವೀನ್, ಎಂ.ಎಂ ಪೂವಣ್ಣ ಉಪಸ್ಥಿತರಿದ್ದರು.