ಮಡಿಕೇರಿ, ಮಾ. 16: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನಪರ ಕಾರ್ಯಕ್ರಮಗಳನ್ನು ಮನೆ ಮನೆಗೆ ಬಿಜೆಪಿ ಕಾರ್ಯಕರ್ತರು ತಲಪಿಸುವದ ರೊಂದಿಗೆ, ಮುಂದಿನ ವಿಧಾನಸಭಾ ಚುನಾವಣೆಗೆ ಪೂರಕ ವಾತಾವರಣ ಸೃಷ್ಟಿಸುವ ಮೂಲಕ ಪ್ರತಿ ಮತಗಟ್ಟೆಯಲ್ಲೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಮುನ್ನುಡಿ ಬರೆಯುವಂತೆ ಕೇಂದ್ರ ಜನೌಷಧ, ರಸ್ತೆ ಸಾರಿಗೆ ರಾಜ್ಯ ಸಚಿವ ಮನ್ಸೂಪ್ ಎಲ್. ಮಾಂಡವ್ಯ ಕರೆ ನೀಡಿದ್ದಾರೆ.ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ನವಶಕ್ತಿ ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಯಲ್ಲಿ ಕಾರ್ಯಕರ್ತರ ತಂಡ ರಚನೆ ಮೂಲಕ ಪ್ರತಿಯೊಂದು ಮನೆ ಹಾಗೂ ಮತದಾರರನ್ನು ಭೇಟಿಯಾಗಿ ಕೇಂದ್ರ ಸರಕಾರದ ಜನಪರ ಯೋಜನೆಗಳ ಕುರಿತು ಅರಿವು ಮೂಡಿಸುವಂತೆ ತಿಳಿಹೇಳಿದರು.ಬಿಜೆಪಿಗೆ ಕಾರ್ಯಕರ್ತರೇ ಆಸ್ತಿಯೆಂದು ನೆನಪಿಸಿದ ಅವರು, ಎಲ್ಲೆಡೆ ಚುನಾವಣಾ ಪೂರ್ವ ತಯಾರಿಯೊಂದಿಗೆ
(ಮೊದಲ ಪುಟದಿಂದ) ಪಕ್ಷದ ಧ್ವಜ, ಬಿತ್ತಿಪತ್ರ, ಬ್ಯಾನರ್‍ಗಳನ್ನು ಕಾರ್ಯಕರ್ತರ ಪಡೆ ಬಿತ್ತಿರಿಸುವ ಮುಖಾಂತರ ವಿಜಯ ಪತಾಕೆ ಹಾರಿಸಲು ಕಾರ್ಯತಂತ್ರ ರೂಪಿಸಬೇಕೆಂದು ಗುಜರಾತ್ ಹಾಗೂ ಈಶಾನ್ಯ ಭಾರತ ರಾಜ್ಯಗಳ ಗೆಲುವಿನ ತಂತ್ರಗಾರಿಕೆ ಉದಾಹರಿಸಿದರು. ಕೊಡಗಿನ ವಿದ್ಯಾಮಾನಗಳನ್ನು ಪಕ್ಷದ ಕಾರ್ಯಾಧ್ಯಕ್ಷರಿಗೆ ಸಲ್ಲಿಸುವದಾಗಿ ಇದೇ ಸಂದರ್ಭ ನುಡಿದರು.
ಲೂಟಿಕೋರ ಸರಕಾರ -ಡಿ.ವಿ.ಎಸ್. : ಮತ್ತೋರ್ವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವನ್ನು ಲೂಟಿಕೋರ, ಕೊಲೆಗಡುಕ, ಭ್ರಷ್ಟ ಸರಕಾರವೆಂದು ಜರೆಯುತ್ತಾ, ಸಿದ್ದರಾಮಯ್ಯ ಅವರೇ ಮಹಾತ್ಮಗಾಂಧೀಜಿ ಕನಸು ಈಡೇರಿಸವ ದಿಸೆಯಲ್ಲಿ ಕಾಂಗ್ರೆಸ್ಸನ್ನು ಕೊನೆಗೊಳಿಸಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕದ ಕಾಂಗ್ರೆಸ್ ಸರಕಾರ ಎಐಸಿಸಿ ನಾಯಕರಿಗೆ ‘ಎ.ಟಿ.ಎಂ.’ ಇದ್ದಂತೆ ಎಂದು ಬಣ್ಣಿಸಿದ ಸದಾನಂದಗೌಡ, ದೇಶದೆಲ್ಲೆಡೆ ಆಳ್ವಿಕೆ ಕಳೆದುಕೊಂಡಿರುವ ಸಂದರ್ಭ ರಾಜ್ಯದಿಂದ ಲಭಿಸುವ ಎಲ್ಲ ಮೂಲದಿಂದ ಹಣ ಲೂಟಿ ಹೊಡೆಯುವ ಕೆಲಸ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಕಳೆದ 60 ವರ್ಷಗಳಿಗೂ ಹೆಚ್ಚು ದೇಶ ಆಳಿದ ಕಾಂಗ್ರೆಸ್ ಕೇವಲ ಒಂದು ಕುಟುಂಬಕ್ಕೆ ಸೀಮಿತ ಅಧಿಕಾರದೊಂದಿಗೆ ಯಾವದೇ ಅಭಿವೃದ್ಧಿ ಮಾಡದ ಪರಿಣಾಮ; ಇಂದು ಪ್ರಧಾನಿ ಮೋದಿ ನಾಯಕತ್ವಕ್ಕೆ ವ್ಯಾಪಕ ಬೆಂಬಲ ದೊರಕುವಂತಾಗಿದ್ದು; ಕರ್ನಾಟಕದ ವಿಧಾನಸಭಾ ಚುನಾವಣೆ ಕಾಂಗ್ರೆಸ್‍ಗೆ ಅಂತಿಮ ವಿದಾಯ ಹೇಳಲಿದೆ ಎಂದು ಭವಿಷ್ಯ ನುಡಿದರು.
ಭದ್ರಕೋಟೆ ಉಳಿಸೋಣ : ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ; ಕೇರಳ ರಾಜ್ಯ ಬಿಜೆಪಿ ಕಾರ್ಯದರ್ಶಿ ಕೆ. ರಂಜಿತ್ ಅವರುಗಳು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಕನಸಿನ ಕಾಂಗ್ರೆಸ್ ಮುಕ್ತ ಭಾರತ ಸಂಕಲ್ಪಕ್ಕಾಗಿ ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗಿನಲ್ಲಿ ಮತ್ತೆ ಎರಡು ವಿಧಾನಸಭಾ ಕ್ಷೇತ್ರಗಳ ಗೆಲುವಿಗಾಗಿ ಶ್ರಮಿಸುವಂತೆ ಭಿನ್ನವಿಸಿದರು.
ತರಾತುರಿ ಉದ್ಘಾಟನೆ : ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ; ಚುನಾವಣೆ ಸಮೀಪಿಸುತ್ತಿರುವಾಗ ಅಪೂರ್ಣ ಕಾಮಗಾರಿಗಳ ನಡುವೆ ಉದ್ಘಾಟನೆ; ಭೂಮಿ ಪೂಜೆಯೊಂದಿಗೆ ನಾಟಕವಾಡುತ್ತಿರುವ ಕಾಂಗ್ರೆಸ್ಸಿಗೆ ಮತ್ತೊಮ್ಮೆ ಕೊಡಗಿನ ಬಿಜೆಪಿ ಪಾಠ ಕಲಿಸಬೇಕೆಂದು ತಿಳಿ ಹೇಳಿದರು. ಎಂಥ ಪರಿಸ್ಥಿತಿಯಲ್ಲೂ ಕಾರ್ಯಕರ್ತರು ಒಗ್ಗಟ್ಟು ಕಾಯ್ದುಕೊಳ್ಳುವದರೊಂದಿಗೆ ಗೆಲುವಿಗಾಗಿ ಶ್ರಮಿಸುವಂತೆ ಅವರು ಕರೆ ನೀಡಿದರು.
ಜಂಗಲ್ ರಾಜ್ಯವಾಗಲಿದೆ : ಒಂದೊಮ್ಮೆ ಬಿಹಾರದಲ್ಲಿ ಜಂಗಲ್‍ರಾಜ್ ಆಳ್ವಿಕೆಯ ಟೀಕೆಯಿದ್ದರೆ; ಇಂದು ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ರಾವಸ್ಥೆಯೊಂದಿಗೆ ಕರ್ನಾಟಕವನ್ನು ಆ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದು ಜರಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಈ ಆಳ್ವಿಕೆ ಕೊನೆಗೊಳಿಸಲು ಕಾರ್ಯಕರ್ತರು ಶ್ರಮಿಸುವದರೊಂದಿಗೆ ಮತ್ತೊಮ್ಮೆ ಚುನಾವಣೆಯಲ್ಲಿ ಆಶೀರ್ವದಿಸಬೇಕೆಂದು ಕಳಕಳಿ ವ್ಯಕ್ತಪಡಿಸಿದರು.
ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸಚಿವ ಮಾಂಡವ್ಯ ಅವರನ್ನು ಪರಿಚಯಿಸಿದರು. ಈ ಸಂದರ್ಭ ಅವರು ರಾಜ್ಯಸಭೆಗೆ ಆಯ್ಕೆಗೊಂಡಿದ್ದಕ್ಕಾಗಿ ಸನ್ಮಾನಿಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಚುನಾವಣಾ ಸಂಚಾಲಕರುಗಳಾದ ಎಂ.ಬಿ. ದೇವಯ್ಯ, ಜಪ್ಪು ಅಚ್ಚಪ್ಪ, ಬಿಜೆಪಿ ಪ್ರಮುಖರಾದ ಎಂ.ಎನ್. ಕುಮಾರಪ್ಪ ಮೊದಲಾದವರು ವೇದಿಕೆಯಲ್ಲಿದ್ದರು.
ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ಸ್ವಾಗತಿಸಿ, ಎಂ.ಕೆ. ಜಗದೀಶ್ ನಿರೂಪಿಸಿದರು. ಭಾರತೀ ರಮೇಶ್ ತಂಡ ವಂದೇ ಮಾತರಂ ಹಾಡಿದರು. ಜಿಲ್ಲೆಯ ಬಿಜೆಪಿಯ ಜಿ.ಪಂ., ತಾ.ಪಂ., ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾ.ಪಂ. ಪ್ರತಿನಿಧಿಗಳ ಸಹಿತ ಬೂತ್ ಮಟ್ಟದ ಪ್ರಮುಖರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.