ಗೋಣಿಕೊಪ್ಪಲು, ಮಾ. 16 : ಭಾರತೀಯ ಜನತಾ ಪಕ್ಷದಲ್ಲಿ ಯಾವದೇ ಬಿನ್ನಭಿಪ್ರಾಯ ಇಲ್ಲ. ಗೋಣಿಕೊಪ್ಪಲುವಿನಲ್ಲಿ ನಡೆದ ಸಭೆ ಬಿಜೆಪಿಯ ಅಧಿಕೃತ ಸಭೆ ಅಲ್ಲ ಎಂದು ವಿರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಕೆಲವು ಪದಾಧಿಕಾರಿಗಳು ಅನಧಿಕೃತ ಸಭೆಯಲ್ಲಿ ಭಾಗವಹಿಸಿದ್ದಾರೆ. ಇಂತಹವರಿಂದ ಸ್ಪಷ್ಟೀಕರಣ ಕೇಳಲಾಗುವದು ಮತ್ತು ಅದನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವದು ಎಂದು ತಿಳಿಸಿದ್ದಾರೆ. ಗುರುವಾರ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದವರು ಪಕ್ಷದ ಯಾವದೇ ಪದಾಧಿಕಾರಿಯಲ್ಲ. ಪಕ್ಷದಲ್ಲಿ ಯಾವುದೇ ಅಭಿಪ್ರಾಯ ಬೇಧವಿದ್ದರೂ ಅಧ್ಯಕ್ಷರ ಗಮನಕ್ಕೆ ತಂದು ಚರ್ಚಿಸಬೇಕು. ಪ್ರತ್ಯೇಕ ಸಭೆಗಳಲ್ಲಿ ಭಾಗವಹಿಸುವದು ಪಕ್ಷ ವಿರೋಧಿ ಚಟುವಟಿಕೆ ಎಂದು ಹೇಳಿದರು. ಪಕ್ಷದ ಕಾರ್ಯಕರ್ತರನ್ನು ತಪ್ಪು ದಾರಿಗೆ ಎಳೆಯುತ್ತಿರುವದು ಖಂಡನೀಯ. ಅಭ್ಯರ್ಥಿಯ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರು ಸ್ಪಷ್ಠ ಪಡಿಸಿದ್ದು, ಸೂಕ್ತ ಅಭ್ಯರ್ಥಿಯನ್ನು ಶೀಘ್ರದಲ್ಲೇ ಘೋಷಿಸುವದಾಗಿ ತಿಳಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಯಾವದೇ ವದಂತಿಗೆ ಕಿವಿಗೊಡದೇ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಚಾರಗಳ ಬಗ್ಗೆ ಗಮನ ಹರಿಸದೆ ಕ್ಷೇತ್ರದಲ್ಲಿ ಬಿ.ಜೆ.ಪಿ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಬೇಕು ಎಂದು ಈ ಸಂದರ್ಭ ಕಿವಿ ಮಾತು ಹೇಳಿದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸುವಿನ್ ಗಣಪತಿ, ಲಾಲ ಭೀಮಯ್ಯ ಉಪಸ್ಥಿತರಿದ್ದರು.