ವೀರಾಜಪೇಟೆ, ಮಾ. 16: ವೀರಾಜಪೇಟೆ ಕೊಡವ ಸಮಾಜ ಬಳಿಯ ಕುಕ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪೂಮಾಲೆ ಮಂದ್ವರೆಗೂ ರೂ. 9 ಲಕ್ಷದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆಯನ್ನು ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಶಿ ಸುಬ್ರಮಣಿ ನೆರವೇರಿಸಿದರು. ಬಳಿಕ ಮಾತನಾಡಿ, ಮಲೆನಾಡು ಅಭಿವೃದ್ಧಿ ಯೋಜನೆಯಿಂದ ರೂ. 5 ಲಕ್ಷ ಹಾಗೂ ಶಾಸಕರ ವಿಶೇಷ ಅನುದಾನ ರೂ. 4 ಲಕ್ಷ ಒಟ್ಟು ರೂ. 9 ಲಕ್ಷದಲ್ಲಿ ಕೊಡವ ಸಮಾಜದಿಂದ ಪೂಮಾಲೆ ಮಂದ್ವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವದು. ಇದರಿಂದ ಇಲ್ಲಿನ ಪೂಮಾಲೆ ಮಂದ್ಗೆ ಅನುಕೂಲವಾಗಲಿದೆ ಎಂದರು. ಪೂಮಾಲೆ ಮಂದ್ಗೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನೀರಿನ ಸೌಲಭ್ಯ ಒದಗಿಸಲಾಗಿದೆ. ಶಾಸಕರ ಪ್ರಯತ್ನದಿಂದ ಕುಕ್ಲೂರು ಭದ್ರಕಾಳಿ ದೇವಾಲಯ ಮತ್ತು ಕಾಲೋನಿಗೆ ಕಾಂಕ್ರೀಟ್ ರಸ್ತೆ, ಕುಕ್ಲೂರು ಗ್ರಾಮದ ಕೊಡಂದೇರ, ಪುಟ್ಟಿಚಂಡ ಕುಟುಂಬಸ್ಥರ ಮನೆಗೆ ರೂ. 4 ಲಕ್ಷ ಅನುದಾನದಲ್ಲಿ ರಸ್ತೆ ಕಾಮಗಾರಿ ಮತ್ತು ತಾತಂಡ, ಮೊಣ್ಣಂಡ, ಕುಟ್ಟಂಡ, ಬಡಕಡ ಕುಟುಂಬಸ್ಥರ ಮನೆಗಳಿಗೆ ರಸ್ತೆ ಅಭಿವೃದ್ಧಿ ಗೊಳಿಸಲಾಗಿದ್ದು ಇನ್ನು ಇತರೆಡೆಗಳಲ್ಲಿ ಉಳಿದ ಕಾಮಗಾರಿಗಳನ್ನು ಮಾರ್ಚ್ ತಿಂಗಳಲ್ಲೇ ಮುಗಿಸಲಾಗುವದು ಎಂದರು.
ಭೂಮಿಪೂಜೆ ಸಂದರ್ಭ ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ತಾತಂಡ ಬಿಫಿನ್ ಕಾವೇರಪ್ಪ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕಬೀರ್ ಗಣಪತಿ, ಗ್ರಾಮದ ಹಿರಿಯರಾದ ಬಿ. ಡಿಕ್ಕ ಅಚ್ಚಪ್ಪ, ತಾತಂಡ ನಾಣಯ್ಯ, ಪ್ರಭ ನಾಣಯ್ಯ, ಪಟ್ಟಡ ಜೀವನ್, ಎ.ಎಂ. ಜೋಯಪ್ಪ, ಪಿ. ಹರಿ, ಯೋಗೇಶ್, ಮುಂತಾದವರು ಉಪಸ್ಥಿತರಿದ್ದರು.