ಮಡಿಕೇರಿ, ಮಾ. 15: ಎಲ್ಲಿ ಮಹಿಳೆಯರನ್ನು ಗೌರವಿಸುತ್ತೆವೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಆರ್ಕೆಜಿಎಂಎಂ ಮಹಾಸ್ವಾಮೀಜಿ ನುಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘ ಸರ್ಕಾರಿ ಅಭಿಯೋಜನಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಗ್ರಾಹಕರ ದಿನಾಚರಣೆ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಯಾನಂದ ಸರಸ್ವತಿ, ಜ್ಯೋತಿಭಾಪುಲೆ ಅವರಂತಹ ಮಹಾನೀಯರು ಮಹಿಳಾ ಸಬಲೀಕರಣಕ್ಕಾಗಿ ದುಡಿದಿದ್ದಾರೆ. ಇಂದಿನ ಸಮಾಜದಲ್ಲಿ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸಮಾನವಾಗಿ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿಜ್ಞಾನ ಮತ್ತು ರಕ್ಷಣಾ ಕ್ಷೇತ್ರ ರಾಜಕೀಯ, ಶಿಕ್ಷಣ ಕ್ಷೇತ್ರಗಳಲ್ಲಿ ಮಹಿಳೆಯು ತನ್ನದೆ ಆದ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.
ಕಾನೂನಿನಲ್ಲಿ ಮಹಿಳೆಯರಿಗೆ ವಿಶೇಷ ಹಕ್ಕುಗಳು ಮತ್ತು ರಕ್ಷಣೆ ನೀಡಿರುತ್ತದೆ. ಸರ್ಕಾರ ವಿಶೇಷ ಸವಲತ್ತುಗಳನ್ನು ನೀಡುತ್ತಾ ಮಹಿಳೆಯರ ಸಬಲೀಕರಣಕ್ಕಾಗಿ ಮುನ್ನುಡಿ ಬರೆದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜಯ ಕುಮಾರ್ ಮಾತನಾಡಿ ಮಹಿಳೆಯರು ಮನಸು ಮಾಡಿದರೆ ಎಲ್ಲವನ್ನೂ ಸಾಧಿಸಬಲ್ಲರೂ ಎಂಬುದಕ್ಕೆ ಕಲ್ಪನಾ ಚಾವ್ಲಾರಂತಹ ಬಾಹ್ಯಕಾಶ ವಿಜ್ಞಾನಿ ಸಾಕ್ಷಿಯಾಗಿದ್ದಾರೆ ಎಂದರು.
ಗ್ರಾಹಕರ ಸಂರಕ್ಷಣಾ ಕಾಯ್ದೆಯು 1986ರಲ್ಲಿ ಜಾರಿಗೆ ಬಂದಿದ್ದು ಈ ಕಾಯ್ದೆಯು ಪ್ರತಿಯೊಬ್ಬ ಗ್ರಾಹಕನ ಹಕ್ಕುಗಳನ್ನು ಸಮರ್ಥವಾಗಿ ರಕ್ಷಣೆ ಮಾಡಿದೆ ಎಂದು ತಿಳಿಸುತ್ತ ಗ್ರಾಹಕರ ಹಕ್ಕುಗಳ ಬಗ್ಗೆ ವಿವರಣೆ ನೀಡಿದರು.
ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪವನೇಶ್ ಡಿ. ಮಾತನಾಡಿ ಮಹಿಳೆಯರನ್ನು ಹಲವು ರೂಪದಲ್ಲಿ ಕಾಣುತ್ತೇವೆ. ಪ್ರತಿಯೊಬ್ಬ ಪುರುಷನ ಜೀವನದಲ್ಲೂ ಅತಿ ಮುಖ್ಯವಾದ ಸ್ಥಾನ ಪಡೆದಿರುತ್ತಾರೆ, ವಕೀಲರು ಕೂಡ ಗ್ರಾಹಕರ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ತಿಳಿಸಿದರು
ಅಪರ ಸಿವಿಲ್ ನ್ಯಾಯಾಧೀಶರಾದ ಶರ್ಮಿಳಾ ಕಾಮತ್ ಕೆ. ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರ ಬಗ್ಗೆ ಮತ್ತು ಮಹಿಳಾ ಹಕ್ಕುಗಳ ಕುರಿತು ತಿಳಿಸಿದರು.
ಸಭೆಯಲ್ಲಿ ಸರ್ಕಾರಿ ಅಭಿಯೋಜಕರಾದ ಕೃಷ್ಣವೇಣಿ, ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್, ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷರಾದ ಎಸ್.ಟಿ.ಸ್ವಾಮಿ, ಜಯಪ್ಪ ಇತರರು ಇದ್ದರು.