ಸಿದ್ದಾಪುರ, ಮಾ. 15: ನೆಲ್ಯಹುದಿಕೇರಿಯ ಶ್ರೀ ಸತ್ಯನಾರಾಯಣ ದೇವಾಲಯಕ್ಕೆ ತೆರಳುವ ಸಾರ್ವಜನಿಕ ರಸ್ತೆಯನ್ನು ಖಾಸಗಿ ಮೊಬೈಲ್ ಸಂಸ್ಥೆಯವರು ಕೇಬಲ್ ಅಳವಡಿಸಲೆಂದು ಉತ್ತಮ ರಸ್ತೆಯ ಮಧ್ಯಭಾಗದಲ್ಲಿ ಗುಂಡಿ ತೋಡಿರುವ ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿ ಸುಖಾಂತ್ಯ ಕಂಡಿದೆ.
ಗುರುವಾರ ಸಂಜೆ ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಶ್ರೀ ಸತ್ಯನಾರಾಯಣ ದೇವಾಲಯಕ್ಕೆ ತೆರಳುವ ಡಾಂಬರು ರಸ್ತೆಯನ್ನು ಮೊಬೈಲ್ ಸಂಸ್ಥೆಯ ಕೇಬಲ್ ಅಳವಡಿಸುವ ಉದ್ದೇಶದಿಂದ ರಸ್ತೆಯ ಮಧ್ಯಭಾಗದಲ್ಲಿ ಜೆಸಿಬಿಯ ಮೂಲಕ ಬೃಹತ್ ಗಾತ್ರದ ಗುಂಡಿ ತೆಗೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಜೆಸಿಬಿ ಅನ್ನು ತಡೆದು ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತಿಳಿಗೊಳಿಸಿದರು. ರಸ್ತೆ ಹಾನಿಗೊಳಿಸಿದ ಬಗ್ಗೆ ಗ್ರಾಮಸ್ಥರು ಪಂಚಾಯಿತಿಗೆ ದೂರು ನೀಡಿದ ಮೇರೆಗೆ ಪಿಡಿಓ ನಂಜುಂಡಸ್ವಾಮಿ ಕೇಬಲ್ ಅಳವಡಿಸಲು ರಸ್ತೆ ಮಧ್ಯೆ ಗುಂಡಿ ತೆಗೆದವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಗೆ ಸಾರ್ವಜನಿಕ ರಸ್ತೆಗೆ ಹಾನಿಗೊಳಿಸಿದ್ದಾರೆಂದು ದೂರು ನೀಡಿದರು. ಈ ಮೇರೆಗೆ ಉಸ್ತುವಾರಿ ವಹಿಸಿಕೊಂಡಿದ್ದ ವ್ಯಕ್ತಿ ನಾಳೆಯಿಂದಲೇ ಗುಂಡಿಮುಚ್ಚುವ ಕಾರ್ಯ ಮಾಡಿಕೊಡುವದಾಗಿ ಲಿಖಿತವಾಗಿ ಮುಚ್ಚಳಿಕೆ ನೀಡಿದರು. ಈ ಸಂದರ್ಭ ಜಿ.ಪಂ., ತಾ.ಪಂ., ಗ್ರಾ.ಪಂ. ಸದಸ್ಯರುಗಳು, ಗ್ರಾಮಸ್ಥರು ಹಾಜರಿದ್ದರು.