ಗೋಣಿಕೊಪ್ಪಲು, ಮಾ. 15: ಬೇಸಿಗೆ ಸಮಯದಲ್ಲಿ ನೀರಿನ ಅಭಾವ ಸೃಷ್ಠಿಯಾಗುವುದು ಸಹಜ. ಮಾನವನೇ ನೀರು ಸಿಗದೆ ಪರದಾಡುವ ಪರಿಸ್ಥಿತಿಗೆ ತಲುಪಿದ್ದಾನೆ. ಅದೇ ರೀತಿ ಪಕ್ಷಿ ಸಂಕುಲ ಕೂಡ ಹನಿ ನೀರಿಗೆ ರೆಕ್ಕೆ ಬಡಿಯುವ ಪರಿಸ್ಥಿತಿಗೆ ತಲುಪಿದೆ. ಇದಕ್ಕೆ ಗೋಣಿಕೊಪ್ಪಲುವಿನ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಶಾಲೆಯ ಚಿತ್ರಕಲಾ ಶಿಕ್ಷಕ ಸತೀಶ್ ಮಾರ್ಗ ದರ್ಶನದಲ್ಲಿ ವಿದ್ಯಾರ್ಥಿಗಳು ಪಕ್ಷಿ ಸಂಕುಲಗಳಿಗೆ ನೀರುಣಿಸುವ ಕಾಯಕಕ್ಕೆ ಕೈ ಹಾಕಿದ್ದು ಪಕ್ಷಿ ಪ್ರಿಯರು ಇದನ್ನು ತಮ್ಮ ಮನೆಗಳಲ್ಲಿ ಅನುಸರಿಸುತ್ತಿದ್ದಾರೆ.
ಇದು ಪರೀಕ್ಷೆಯ ಸಮಯ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಯ ನಡುವೆ ಪಕ್ಷಿಗಳಿಗೆ ನೀರುಣಿಸಿ ಸಂತಸ ಪಡೆಯುತ್ತಿದ್ದಾರೆ. ಶಾಲೆಯ ಸುತ್ತಮುತ್ತ ಪ್ಲಾಸ್ಟಿಕ್ ಬಾಟಲ್‍ಗಳನ್ನು ಬಳಸಿಕೊಂಡು ಪಕ್ಷಿಗಳಿಗೆ ನೀರುಣಿಸಲಾಗುತ್ತಿದೆ. ಪ್ಲಾಸ್ಟಿಕ್ ಬಾಟಲ್‍ಗಳನ್ನು ಕತ್ತರಿಸಿ ಅದರಲ್ಲಿ ಪಕ್ಷಿ ಕೂತು ನೀರು ಕುಡಿಯುವ ರೀತಿಯಲ್ಲಿ ರಚಿಸಿದ್ದು ಇದು ಯಶಸ್ವಿಯಾಗಿದೆ. ಸದÀ್ಯಕ್ಕೆ 25 ಬಾಟಲ್‍ಗಳನ್ನು ಬಳಸಿಕೊಂಡಿದ್ದು ಮುಂದಿನ ದಿನಗಳಲ್ಲಿ 50 ಬಾಟಲ್‍ಗಳಲ್ಲಿ ನೀರು ತುಂಬಿಸಿ ಪಕ್ಷಿಗಳಿಗೆ ನೀರುಣಿಸುವ ಬಯಕೆ ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದದಾಗಿದೆ. ಮರಗಳಲ್ಲಿ ಹಗ್ಗದ ಮೂಲಕ ಬಾಟಲ್‍ಗಳನ್ನು ನೇತು ಹಾಕಿ ಅದರಲ್ಲಿ ನೀರು ತುಂಬಿಸಲಾಗುವದು ಇದನ್ನು ನೋಡಿ ಪಕ್ಷಿಗಳು ತಮ್ಮ ದಾಹ ನೀಗಿಸಿಕೊಳ್ಳುತ್ತಿವೆ. ಇದನ್ನು ಕಂಡಿರುವ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಈ ರೀತಿ ಮಾಡಲು ಮುಂದಾಗಿದ್ದಾರೆ.
-ರಾಕೇಶ್