ವೀರಾಜಪೇಟೆ, ಮಾ.15: ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟ ಮೀಸಲು ಅರಣ್ಯವನ್ನು ಕೇರಳದ ಉದ್ಯಮಿಗಳು ಕಸದ ಕೊಂಪೆಯಾಗಿ ಬಳಸುತ್ತಿದ್ದು ಮಾಕುಟ್ಟ್ಟ ಅರಣ್ಯ ವಿಭಾಗ ಹಾಗೂ ಜಿಲ್ಲಾಡಳಿತ ಮೀಸಲು ಅರಣ್ಯದ ಪರಿಸರವನ್ನು ರಕ್ಷಿಸುವಲ್ಲಿ ವಿಫಲಗೊಂಡಿದೆ.

ಪೆರುಂಬಾಡಿಯಿಂದ ಮಾಕುಟ್ಟಕ್ಕೆ ತೆರಳುವ ಬಲಭಾಗದ ಮೀಸಲು ಅರಣ್ಯದಲ್ಲಿ ಭಾರೀ ಕಾಡು ಜಾತಿಯ ಬೆಲೆಬಾಳುವ ಮರಗಳಿದ್ದು ಜೊತೆಯಲ್ಲಿಯೇ ಕೇರಳದ ಘನತ್ಯಾಜ್ಯದ ಚೀಲಗಳು ಗಡಿಯ ಹನುಮಾನ್‍ಪಾಲದಿಂದ ಮಾಕುಟ್ಟದವರೆಗೆ ಎಸೆಯಲಾಗಿದೆ. ಕೇರಳದ ಕಣ್ಣಾನೂರು, ತಲಚೇರಿ, ಕೂತುಪರಂಬು, ಮಟ್ಟನೂರು, ಇರಿಟ್ಟಿ ಕೂಟುಪೊಳೆಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯಗಳಿಗೆ ಗಡಿಯ ಮೀಸಲು ಅರಣ್ಯ ಆಶ್ರಯವಾಗಿದೆ. ಅನೇಕ ವರ್ಷಗಳಿಂದ ಕೇರಳದ ಲಾರಿ ಹಾಗೂ ಮಿನಿ ಲಾರಿಯಲ್ಲಿ ಘನತ್ಯಾಜ್ಯವನ್ನು ಗಡಿ ಭಾಗಕ್ಕೆ ಸಾಗಿಸಲು ಕೇರಳದ ಆಯ್ದ ವೃತ್ತಿಯವರು ಈ ದಂಧೆಯಲ್ಲಿ ತೊಡಿಗಿದ್ದಾರೆ. ಕೊಡಗಿನ ಪ್ರವಾಸಿಗರು ಕೇರಳದ ಪ್ರವಾಸ ಕೈಗೊಂಡಾಗ ಮೀಸಲು ಅರಣ್ಯದಲ್ಲಿ ಮರಗಳೊಂದಿಗೆ ಘನತ್ಯಾಜ್ಯವನ್ನು ಬಲತ್ಕಾರವಾಗಿ ನೋಡ ಬೇಕಾಗಿದೆ. ಈಚೆಗೆ ಮಾಧ್ಯಮದವರು ಮಾಕುಟ್ಟಕ್ಕೆ ತೆರಳಿದ್ದಾಗ ಮೀಸಲು ಅರಣ್ಯದಲ್ಲಿ ಸುಮಾರು 50ರಿಂದ 100ಟನ್‍ಗಳಷ್ಟು ಅಧಿಕ ಪ್ಯಾಕೇಜ್ ಮಾಡಿದ ಘನತ್ಯಾಜ್ಯಗಳು ಕಂಡುಬಂದವು. ಇದನ್ನು ಕಂಡಾಗ ಮೀಸಲು ಅರಣ್ಯದ ರಕ್ಷಣೆ ಕೇವಲ ಸರಕಾರದ ವೆಚ್ಚದ ದಾಖಲೆಯಲ್ಲಿ ಮಾತ್ರ ಎಂಬಂತಾಗಿದ್ದು, ಈ ಮೀಸಲು ಅರಣ್ಯದಲ್ಲಿ ಉತ್ತಮ ಪರಿಸರ ಕಾಪಾಡಲು ಮಾಕುಟ್ಟ ಅರಣ್ಯ ಅಧಿಕಾರಿಗಳು ವಿಫಲರಾಗಿದ್ದಾರೆ ಎನ್ನುವದು ಗೊತ್ತಾಗುತ್ತದೆ.

ಹನುಮಾನ್‍ಪಾಲದ ಸುಮಾರು 200ಮೀಟರ್ ಅಂತರದಲ್ಲಿ ಮೀಸಲು ಅರಣ್ಯಕ್ಕೆ ಪ್ರವೇಶಿಸದಂತೆ ಜೊತೆಗೆ ಕಸ ಹಾಕದಂತೆ ಇಲಾಖೆಯಿಂದ ನಾಮಫಲಕ ಅಳವಡಿಸಲಾಗಿದೆ. ನಾಮಫಲಕದ ಆಜು ಬಾಜಿನಲ್ಲಿಯೇ ಮದ್ಯದ ಖಾಲಿ ಬಾಟಲುಗಳು, ನೀರಿನ ಪ್ಲಾಸ್ಟಿಕ್ ಬಾಟಲುಗಳು, ತಟ್ಟೆಗಳು, ಲೋಟಗಳನ್ನು ಬಿಸಾಡಲಾಗಿದೆ. ಕರ್ನಾಟಕ ಗಡಿಭಾಗದ ಮೀಸಲು ಅರಣ್ಯ ಕೇರಳ ಪ್ರವಾಸಿಗರ ಮೋಜು ಮಸ್ತಿಯ ತಾಣವಾಗಿದೆ. ಅರಣ್ಯದ ಪಕ್ಕದಲ್ಲಿಯೇ ಮದ್ಯ ಸೇವಿಸಿದವರು ಒಣಗಿದ ಮರಗಳಿಗೆ ಬೆಂಕಿ ಕೊಟ್ಟು ನಾಶಪಡಿಸುವದು ಹವ್ಯಾಸವಾಗಿದೆ. ಇದು ಕಿಡಿಗೇಡಿಗಳ ದುಷ್ಕøತ್ಯವಾಗಿದ್ದರೂ ಅರಣ್ಯ ಇಲಾಖೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರವಾಸಿಗರ ಅಪರಾಧಗಳನ್ನು ತಡೆಯುವಲ್ಲಿ ವಿಫಲವಾಗಿದೆ ಎನ್ನಬಹುದು.

ಕೇರಳ ಪ್ರವಾಸಿಗರು ಘನತ್ಯಾಜ್ಯವನ್ನು ಕೊಡಗಿನ ಗಡಿಭಾಗದಲ್ಲಿ ಹಾಕುತ್ತಿರುವ ಕುರಿತು ಬೇಟೋಳಿ ಗ್ರಾಮ ಪಂಚಾಯಿತಿ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ಚರ್ಚಿಸಲಾಯಿತೇ ವಿನ: ಮುನ್ನೆಚ್ಚರಿಕೆ ಕ್ರಮ ಜಾರಿಗೆ ಬರಲಿಲ್ಲವೆನ್ನಲಾಗಿದೆ.

ಕೇರಳದ ಘನತ್ಯಾಜ್ಯದ ದಂಧೆ ಕೊಡಗಿನ ಮೀಸಲು ಅರಣ್ಯದಲ್ಲಿ ನಾಲ್ಕೈದು ವರ್ಷಗಳಿಂದ ನಡೆಯುತ್ತಿದ್ದರೂ ಅರಣ್ಯ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಈ ಕುರಿತು ತಲೆ ಕೆಡಿಸಿಕೊಂಡಿಲ್ಲ.

ಇದನ್ನು ತಡೆಯಲು ಗ್ರಾಮ ಪಂಚಾಯಿತಿ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿಗೂ ಸಾಧ್ಯವಾಗಿಲ್ಲ. ಪೆರುಂಬಾಡಿ ಚೆಕ್‍ಪೋಸ್ಟ್‍ನಿಂದ ಸುಮಾರು 15 ಕಿ.ಮೀ.ವರೆಗೆ ಸಿ.ಸಿ. ಕ್ಯಾಮೆರಾ, ಜೊತೆಗೆ ಅರಣ್ಯ ವೀಕ್ಷಕರನ್ನು ನೇಮಕ ಮಾಡಬೇಕು ಎಂದು ಮೀಸಲು ಅರಣ್ಯದಲ್ಲಿ ಮಾಧ್ಯಮದವರಿಗೆ ಘನತ್ಯಾಜ್ಯದ ರಾಶಿಯನ್ನು ತೋರಿಸಿದ ಜಯಕರ್ನಾಟಕ ಸಂಘಟನೆಯ ತಾಲೂಕು ಸಮಿತಿ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ, ಉಪಾಧ್ಯಕ್ಷ ಕುಂಞÂರ ಸುನು ಸುಬ್ಬಯ್ಯ ಒತ್ತಾಯಿಸಿದ್ದಾರೆ.

-ಡಿ.ಎಂ.ಆರ್.