ಮಡಿಕೇರಿ, ಮಾ. 15 : ಕೊಡಗು ಇದೀಗ ಆನೆಗಳಿಂದ ಮಾನವನ ಬಲಿಯೊಂದಿಗೆ ಪ್ರಾಕೃತಿಕ ಅವ್ಯವಸ್ಥೆಯಿಂದಾಗಿ ಆಹಾರ ಅರಸುತ್ತ ಬರುವ ಆನೆಗಳು ನಾಡಿನಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತಿರುವ ದಾರುಣ ಸನ್ನಿವೇಶ ನಿತ್ಯದ ಆಗು ಹೋಗುಗಳಲ್ಲಿ ಒಂದಾಗಿ ಸೇರ್ಪಡೆಗೊಳ್ಳ್ಳುತ್ತಿದೆ. ಇಂದು ದಕ್ಷಿಣ ಕೊಡಗಿನಲ್ಲಿ ಮೂರು ಆನೆಗಳು ದಾರುಣ ಸಾವಿಗೀಡಾಗಿದ್ದು, ಉತ್ತರ ಕೊಡಗಿನ ಭಾಗದಲ್ಲಿ ಮತ್ತೊಂದು ಆನೆ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದೆ. ಇದೇ ಪ್ರದೇಶದಲ್ಲಿ ಇನ್ನೊಂದೆಡೆÀ ಇಂದು ಬೆಳಗಿನ ಜಾವ 5 ಆನೆಗಳು ಧಾಳಿ ನಡೆಸಿ ಅನೇಕ ತೋಟ ಮಾಲೀಕರ ಬೆಳೆಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ.
ಸರಕಾರದ ನಿರ್ಲಕ್ಷ್ಯದಿಂದ ಮಾನವ- ಆನೆ ಸಂಘರ್ಷಕ್ಕೆ ಅಂತ್ಯವಿಲ್ಲದಾಗಿದ್ದು ಮಾನವ ಹಾಗೂ ಆನೆಗಳ ಪ್ರ್ರಾಣ ಹರಣ ಒಂದೆಡೆಯಾದರೆ, ಬೆಳೆದ ಬೆಳೆಗಳು ನಾಶಗೊಂಡು ಬೆಳೆಗಾರರು ಅಸಹನೀಯ ಬದುಕು ಸಾಗಿಸಬೇಕಾದ ದುಸ್ಥಿತಿ ಒದಗಿದೆ.
ಇಂದು ಕುಟ್ಟ ಬಾಡಗ ಗ್ರಾ. ಪಂ. ವ್ಯಾಪ್ತಿಯ ಚೂರಿಕಾಡು ಗ್ರಾಮದಲ್ಲಿ ಮೂರು ಆನೆಗಳು ದಾರುಣ ಸಾವಿಗೀಡಾಗಿವೆ. ಕುಶಾಲನಗರ ಸನಿಹದ ರಂಗ ಸಮುದ್ರದಲ್ಲಿ ಒಂದು ಹೆಣ್ಣ್ಣಾನೆ ಕೆಸರಿನ ಮಡುವಿನಲ್ಲಿ ಸಿಲುಕಿ ಬದುಕಿಗಾಗಿ ಒದ್ದಾಡುತ್ತಿದೆ, ಕಣಿವೆಯಲ್ಲಿ 5 ಆನೆಗಳು ಧಾಳಿ ನಡೆಸಿ ಗ್ರಾಮಸ್ಥರ ಬೆಳೆಗಳನ್ನು ಧ್ವಂಸ ಮಾಡಿವೆ.
ಘಟನೆ-1
ಕುಟ್ಟ ವ್ಯಾಪ್ತಿಯಲ್ಲಿ 2 ತಿಂಗಳ ಮರಿ ಸಹಿತ 3 ಕಾಡಾನೆಗಳು ಸಾವಿಗೀಡಾಗಿವೆ. ಹೆಣ್ಣಾನೆಯೊಂದರ ದೇಹದ ಹಿಂಭಾಗದಲ್ಲಿ ಗುಂಡೇಟಿನ ಗುರುತು ಕೂಡ ಪತ್ತೆಯಾಗಿರುವದು ಗಮನಾರ್ಹ.
ಕೆ.ಬಾಡಗ ಗ್ರಾ.ಪಂ ವ್ಯಾಪ್ತಿಯ ಚೂರಿಕಾಡು ಗ್ರಾಮದ ಬೊಳ್ಳರಿಗೇಟ್ ಸಮೀಪ ಹೆಣ್ಣಾನೆಯೊಂದು ತನ್ನ ಮರಿಯೊಂದಿಗೆ ನೆಲ ಕಚ್ಚಿದೆ. ಅಲ್ಲದೆ, ಇದೇ ಗ್ರಾಮದ ಕೆರೆಯೊಂದರಲ್ಲಿ ಮತ್ತೊಂದು ಕಾಡಾನೆ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಪ್ರಕರಣ ನಡೆದಿದೆ.
ಮೊದಲನೇ ಪ್ರಕರಣದಲ್ಲಿ ಮಾಚಿಮಾಡ ರಾಜ ತಿಮ್ಮಯ್ಯ ಅವರ ತೋಟದ ಸಮೀಪ ಹೆಣ್ಣಾನೆಯೊಂದು ತನ್ನ 2 ತಿಂಗಳ ಮರಿಗೆ ಹಾಲುಣಿಸುವ ಸ್ಥಿತಿಯಲ್ಲಿ ಕುಸಿದು ಬಿದ್ದ ಸಂದರ್ಭ ಮರಿಯೂ ಸಹ ತಾಯಿಯ ದೇಹ ಭಾರಕ್ಕೆ ಸಿಲುಕಿ ಸಾವಿಗೀಡಾಗಿದೆ. ಸಾವಿಗೀಡಾದ ಹೆಣ್ಣಾನೆಯ ದೇಹದ ಹಿಂಭಾಗದಲ್ಲಿ ಹಳೆ ಗುಂಡೇಟಿನ ಗಾಯ ಪತ್ತೆಯಾಗಿದೆ. ಇದೇ ಗ್ರಾಮದ ಮುಕ್ಕಾಟಿರ ಗಪ್ಪು ಗಣಪತಿಯವರ ಕೆರೆಯಲ್ಲಿ ಕಾಡಾನೆಯೊಂದು ಸತ್ತಿರುವ ಘಟನೆ ನಡೆದಿದೆ. ಕಾಡಾನೆಯ ದೇಹ ಬಹುಭಾಗ ನೀರಿನಲ್ಲಿ ಮುಳುಗಿದೆ. ಕಾಡಾನೆಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಘಟನೆಯ ಸ್ಥಳಕ್ಕೆ ಅರಣ್ಯ ಇಲಾಖೆಯ ಎಸಿಎಫ್ ಶ್ರೀಪತಿ, ನಾಗರಹೊಳೆ ಎಸಿಎಫ್ ಪೌಲ್,
(ಮೊದಲ ಪುಟದಿಂದ) ಪೊನ್ನಂಪೇಟೆ ಆರ್ಎಫ್ಒ ಗಂಗಾಧರ್, ನಾಗರಹೊಳೆ ಆರ್ಎಫ್ಒ ಅರವಿಂದ್, ವೈಲ್ಡ್ ಲೈಫ್ ಸೊಸೈಟಿಯ ವಾರ್ಡನ್ ಕುಂಞಂಗಡ ಬೋಸ್ ಮಾದಪ್ಪ, ಸ್ಥಳಕ್ಕೆ ಭೇಟಿ ನೀಡಿ ಆನೆಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನೆ-2
ಇಂದು ಆನೆಗಳಿಗೆ ದುರ್ದಿನವೆನ್ನಬಹುದು. ಕಾಡಾನೆಯೊಂದು ಕೆಸರಿನಲ್ಲಿ ಸಿಲುಕಿ ಹೊರಬರಲಾರದೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವÀ ಘಟನೆಯೊಂದು ನಂಜರಾಯಪಟ್ಟಣ ಗ್ರಾಮಪಂಚಾಯ್ತಿ ವ್ಯಾಪ್ತಿಯ ರಂಗಸಮುದ್ರ ಹೊಸಪಟ್ಟಣ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ನಿನ್ನೆ ಮಧ್ಯರಾತ್ರಿ ವೇಳೆ ಸುಮಾರು 35 ರ ಪ್ರಾಯದ ಹೆಣ್ಣಾನೆಯೊಂದು ರಂಗಸಮುದ್ರದ ಪರ್ಲಕೋಟಿ ವಿಜಯ ಎಂಬವರ ತೋಟಕ್ಕೆ ನುಗ್ಗಿದೆ. ರಾತ್ರಿ ವೇಳೆÀಯೇ ಸಾಕಷ್ಟು ಪ್ರಮಾಣದಲ್ಲಿ ತೋಟದಲ್ಲಿನ ಬೆಳೆಗಳನ್ನು ಧ್ವಂಸಗೊಳಿಸಿದೆ. ಬಳಿಕ ವಿಜಯ ಅವರ ತೋಟದ ನಡುವೆ ಇರುವ ಕೆಸರು ಮಿಶ್ರಿತ ಕೆರೆಯೊಳಕ್ಕೆ ಇಳಿದಿದೆ. ಮಣ್ಣಿನ ಕೊಸರಿನಲ್ಲಿ ಸಿಲುಕಿ ನಲುಗಿದೆ, ಇಂದು ಬೆಳಿಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜು ನಾಥ್, ವಲಯಾಧಿಕಾರಿ ಅರುಣ್, ಡಿಆರ್ಎಫ್ಓ ಗಳಾದ ಕನ್ನಂಡ ರಂಜನ್, ಬಾನಂಡ ದೇವಿಪ್ರಸಾದ್ ಹಾಗೂ ಅನಿಲ್ ಡಿಸೋಜ ನೇತೃತ್ವದ ಅರಣ್ಯ ಸಿಬ್ಬಂದಿ ತಂಡ ಕೆಸರಿನಲ್ಲಿ ಸಿಲುಕಿದ ಆನೆಯನ್ನು ಮೇಲಕ್ಕೆತ್ತಲು ಆನೆ ಶಿಬಿರದ ಆನೆಗಳಾದ ಧನಂಜಯ, ಇಂದ್ರ ಹಾಗೂ ಕಂಜನ್- ಈ ಆನೆಗಳನ್ನು ಕರೆ ತಂದು ಕೆಸರಿನಲ್ಲಿ ಸಿಲುಕಿದ ಆನೆಯನ್ನು ದಡ ಸೇರಿಸಲು ನಡೆಸಿದ ಪ್ರಯತ್ನ ವಿಫಲವಾಯಿತು. ಮಾವುತರುಗಳಾದ ಗೋಪಾಲ, ಭಾಸ್ಕರ ಮತ್ತು ಸಿಬ್ಬಂದಿಗಳು ಆನೆಯನ್ನು ಹೊರತರಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂದಿತು. ಬಸವಳಿದಿರುವ ಆನೆ ನಡೆಯಲೂ ಆಗದಷ್ಟು ತ್ರಾಣ ಕಳೆದುಕೊಂಡಿದೆ. ವನ್ಯಜೀವಿ ತಜ್ಞ ಡಾ.ಉಮಾಶಂಕರ್ ಅವರನ್ನು ಸ್ಥಳಕ್ಕೆ ಕರೆಸಿದ್ದು ಗ್ಲೂಕೊಸ್ ನೀಡುವದ ರೊಂದಿಗೆ ಆರೈಕೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಅಂತೂ ಇಲ್ಲಿ ಸಿಲುಕಿಕೊಂಡ ಈ ಹೆಣ್ಣಾನೆ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದೆ.
ಘಟನೆ-3
ಈ ನಡುವೆ ಇಂದು ಮತ್ತೊಂದು ಆನೆ ಸಂಬಂಧಿತ ಪ್ರಕರಣ ನಡೆದಿದೆ. ಕುಶಾಲನಗರ ಸನಿಹದ ಕಣಿವೆಗೆ ಲಗ್ಗೆ ಹಾಕಿದ ಆನೆಗಳಿಂದ ಅಪಾರ ಬೆಳೆ ನಷ್ಟವುಂಟಾಗಿದೆ; ಗ್ರಾಮಸ್ಥರು ಭಯಬೀತರಾಗಿದ್ದಾರೆ.
ಬಾಣಾವರ ಮೀಸಲು ಅರಣ್ಯದಿಂದ ಚಿನ್ನೇನಹಳ್ಳಿ, ಮರೂರು ಮಾರ್ಗವಾಗಿ ಹಾರಂಗಿ ನಾಲೆಯ ಮೇಲೆ 5 ಕಾಡಾನೆಗಳು ಕಣಿವೆ ಗ್ರಾಮಕ್ಕೆ ನುಗ್ಗಿ ಗ್ರಾಮದ ಭಾರದ್ವಾಜ್ ಕೆ. ಆನಂದತೀರ್ಥ ಅವರಿಗೆ ಸೇರಿದ ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಬೀಡುಬಿಟ್ಟಿದ್ದು, ತೋಟದಲ್ಲಿನ ಬೆಳೆಯನ್ನು ನಾಶ ನಾಶಪಡಿಸಿವೆ. ನಂತರ ಕಾವೇರಿ ನದಿ ದಂಡೆಯಲ್ಲಿಯೇ ಸಂಚರಿಸಿದ ಆನೆಗಳು ನದಿ ದಂಡೆಯಲ್ಲಿ ರೈತರು ಮಾಡಿರುವ ಕೃಷಿ ಫಸಲನ್ನು ತಿಂದು, ತುಳಿದು ನಾಶಪಡಿಸಿವೆ. ಬಳಿಕ ಅಲ್ಲಿಂದ ಆನೆಗಳನ್ನು ಓಡಿಸುತ್ತಿ ದ್ದಂತೆಯೇ ಮರೂರು ಕಡೆಗೆ ತೆರಳಿ ದಿನೇಶ್ ಎಂಬವರ ಮನೆ ಛಾವಣಿ ಕಿತ್ತುಹಾಕಿದವು. ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಗುದ್ದಿ, ಅಲ್ಲಿಯೂ ಛಾವಣಿ ಹಾಳುಗೆಡವಿದವು. ಮಕ್ಕಳು ಬಂದಿಲ್ಲದ ಕಾರಣ ಸಂಭಾವ್ಯ ಅಪಾಯ ತಪ್ಪಿತು. ಅಲ್ಲಿಯೇ ರಾಜು ಎಂಬವರು ಬೆಳೆದಿದ್ದ ಮೆಣಸಿನ ಗಿಡಗಳನ್ನು ಹಾಳುಗೆಡವಿದವು. ಅಲ್ಲಿಂದ ಓಡಿಸುತ್ತಿದ್ದಂತೆಯೇ ಆನೆಗಳು ಹಳೆಗೋಟೆ ಗ್ರಾಮಕ್ಕೆ ದಾಳಿ ಮಾಡಿ ಗಣೇಶ್, ಕೇಶವ ಎಂಬವರು ಬೆಳೆದಿದ್ದ ಜೋಳದ ಬೆಳೆಯನ್ನು ನಾಶ ಮಾಡಿವೆ.
ಅಲ್ಲದೆ, ಪಕ್ಕದ ಶಿವರುದ್ರಪ್ಪ ಹಾಗೂ ಜಯರಾಂ ಎಂಬವರುಗಳಿಗೆ ಸೇರಿದ ಜಮೀನಿನಲ್ಲಿ ಬೆಳೆಯಲಾಗಿದ್ದ ಬಾಳೆ, ತೆಂಗು ಮತ್ತು ಅಡಿಕೆ ಬೆಳೆಗಳನ್ನು ಸಹ ತುಳಿದು, ತಿಂದು ನಷ್ಟ ಪಡಿಸಿವೆ. ಕಾಡಾನೆ ಹಿಂಡಿನಲ್ಲಿ ಮರಿಗಳೂ ಇರುವದರಿಂದ ಮತ್ತಷ್ಟು ಅಪಾಯಕಾರಿಯಾಗಿವೆ. ಈ ವ್ಯಾಪ್ತಿ ಯಲ್ಲಿ ಈಗ ನಾಗರಿಕರು ಹಗಲಿನ ವೇಳೆಯಲ್ಲಿ ತಿರುಗಾಡಲೂ ಭಯ ಪಡುತ್ತಿದ್ದಾರೆ. ಪರೀಕ್ಷಾ ಸಮಯ ಆಗಿರುವದರಿಂದ ವಿದ್ಯಾರ್ಥಿಗಳ ಭವಿಷ್ಯವೂ ಆತಂಕದಲ್ಲಿದೆ.
ಭಾರಧ್ವಾಜ್ ಅವರ ತೋಟದಲ್ಲಿ ಕಾಡಾನೆಗಳು ಬೀಡು ಬಿಟ್ಟ ಸಂದರ್ಭ ಸಮೀಪದ ಕಾವೇರಿ ನದಿಗೆ ಇಳಿದು ನೀರು ಕುಡಿದು ಮಾರ್ಗದಲ್ಲಿ ಮರಳಿ ಅದೇ ಮಾರ್ಗದಲ್ಲಿ ಹಿಂತಿರುಗಿ ಪಕ್ಕದ ತೋಟಕ್ಕೆ ನುಗ್ಗಿರುವ ಪ್ರಸಂಗ ನಡೆದಿದೆ.
ಬೆಳಗ್ಗಿನ ಜಾವ 5.30 ಗಂಟೆಗೆ ಆನೆಗಳ ಹಿಂಡು ತೋಟಕ್ಕೆ ಲಗ್ಗೆ ಇಟ್ಟಿರುವದನ್ನು ನೋಡಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ ನಂತರ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಧಾವಿಸಿ ಮೊದಲು ನಾಲ್ಕು ಆನೆಗಳನ್ನು ಬಾಣಾವರ ಮೀಸಲು ಅರಣ್ಯ ಪ್ರದೇಶಕ್ಕೆ ಓಡಿಸಿದರು. ಉಳಿದ ಇನ್ನೊಂದು ಆನೆ ಕಾವೇರಿ ನದಿಯ ದಡದಲ್ಲಿ ನಿಂತಿದ್ದು ಗೋಚರ ಗೊಂಡಾಗ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಧ್ಯಾಹ್ನ 12 ಗಂಟೆಗೆ ಪಟಾಕಿ ಸಿಡಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಆನೆಯನ್ನು ಚಿನ್ನೇನಹಳ್ಳಿ ಅರಣ್ಯ ಮಾರ್ಗವಾಗಿ ಬಾಣಾವರ ಮೀಸಲು ಅರಣ್ಯಕ್ಕೆ ಓಡಿಸಿದರು.
ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಹಾಗೂ ಕಣಿವೆ ಉಪ ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ಬಾಣಾವಾರ ವ್ಯಾಪ್ತಿಯ ಮಹಾದೇವ ನಾಯಕ್, ದುಬಾರೆ ವ್ಯಾಪ್ತಿಯ ರಂಜನ್, ಹಾಗೂ ಸಿಬ್ಬಂದಿಗಳಾದ ದೇವೇಂದ್ರ, ರಾಜು, ರಾಜಪ್ಪ ಮತ್ತಿತರ 50ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು. ಆದರೆ, ಬೆಳೆಗಾರರು ಮಾತ್ರ ತೀವ್ರ ನಷ್ಟ ಅನುಭವಿಸಿ ಸಂಕಷ್ಟಕ್ಕೀಡಾಗಿ ದ್ದಾರೆ.
ಚಿತ್ರ ವರದಿ : ಹರೀಶ್ ಮಾದಪ್ಪ, ಚಂದ್ರಮೋಹನ್, ನಾಗರಾಜಶೆಟ್ಟಿ, ಎನ್.ಎನ್. ದಿನೇಶ್