ಸೋಮವಾರಪೇಟೆ,ಮಾ.15 : ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹ್ಯಾಂಡ್‍ಪೋಸ್ಟ್‍ನಲ್ಲಿ ಪ್ರಭಾವಿ ವ್ಯಕ್ತಿಯೋರ್ವರು ಲಾಂಗ್ ಬೀಸಿದ ಘಟನೆಗೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಮುಂದಿನ ಕ್ರಮಕ್ಕಾಗಿ ತಹಶೀಲ್ದಾರ್‍ಗೆ ವರ್ಗಾಯಿಸಿದ್ದಾರೆ.

ಕೊಡ್ಲಿಪೇಟೆ ಸಮೀಪದ ಹ್ಯಾಂಡ್‍ಪೋಸ್ಟ್‍ನಲ್ಲಿ ಕಳೆದ ಕೆಲ ದಿನಗಳ ಹಿಂದೆ ವ್ಯಕ್ತಿಯೋರ್ವ ಕಾರಿನಿಂದ ಇಳಿದು ಲಾಂಗ್ ತೆಗೆದು ಸ್ಥಳದಲ್ಲಿದ್ದವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೂ ಅಲ್ಲದೇ ಮೊಬೈಲ್‍ನಲ್ಲಿ ವೀಡಿಯೋ ಮಾಡುತ್ತಿದ್ದವರ ಬಳಿಬಂದು ಲಾಂಗ್ ಬೀಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆ ಶನಿವಾರಸಂತೆ ಪೊಲೀಸರು ಆರೋಪಿಯ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಬಳದ ತಾಲೂಕು ಅಧ್ಯಕ್ಷ, ಪೆಟ್ರೋಲ್ ಬಂಕ್‍ನ ಮಾಲೀಕನಾಗಿರುವ ತೇಜ್‍ಕುಮಾರ್ ಎಂಬಾತನ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸ್ ಇಲಾಖೆಯ ಮೇಲಧಿಕಾರಿಗಳ ಸೂಚನೆ ಮೇರೆ ಈ ಕ್ರಮ ಕೈಗೊಳ್ಳಲಾಗಿದೆ.

ಕೊಡ್ಲಿಪೇಟೆಯ ಕಾಂಗ್ರೆಸ್ ಮುಖಂಡನಾಗಿರುವ ತೇಜ್‍ಕುಮಾರ್, ಕಳೆದ ಕೆಲ ದಿನಗಳ ಹಿಂದೆ ತನ್ನದೇ ಪೆಟ್ರೋಲ್ ಬಂಕ್ ಬಳಿ ಯುವಕರ ಮೇಲೆ ಲಾಂಗ್ ಬೀಸಿದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇವನ ದರ್ಪ ನೋಡಿ ಎಂದು ವಾಟ್ಸಪ್‍ಗಳಲ್ಲಿ ವೀಡಿಯೋ ಸಂದೇಶ ಹರಿದಾಡುತ್ತಿತ್ತು. ಕಳೆದ ತಾ. 12ರಂದು ‘ಶಕ್ತಿ’ಯಲ್ಲಿ ಈ ಬಗ್ಗೆ ಪ್ರಥಮ ವರದಿ ಪ್ರಕಟಗೊಂಡಿತ್ತು.

ಜಂಗಲ್‍ರಾಜ್ ಸರ್ಕಾರ-ಶಾಸಕ ರಂಜನ್: ಕರ್ನಾಟಕದಲ್ಲಿ ಜಂಗಲ್‍ರಾಜ್ ಸರ್ಕಾರವಿದೆ. ಕಾಂಗ್ರೆಸ್ ಸರ್ಕಾರ ರೌಡಿಸಂಗೆ ಪ್ರೋತ್ಸಾಹ ನೀಡುತ್ತಿದೆ. ತಮ್ಮ ದಂಧೆಗಳಿಗೆ ತಡೆಹಾಕುವ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವ ಮಟ್ಟಕ್ಕೆ ಈ ಸರ್ಕಾರದಲ್ಲಿ ರೌಡಿಗಳು ಬೆಳೆದಿದ್ದಾರೆ. ಇಂತಹ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕು. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಶಾಸಕ ಅಪ್ಪಚ್ಚು ರಂಜನ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡುವಷ್ಟರ ಮಟ್ಟಿಗೆ ಕೊಡ್ಲಿಪೇಟೆಯಲ್ಲಿ ರೌಡಿಸಂ ಬೆಳೆದಿದೆ. ಪೊಲೀಸರು ಕೇವಲ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತಹಶೀಲ್ದಾರ್ ಎದುರು ಮುಚ್ಚಳಿಕೆ ಬರೆಸಿಕೊಂಡರಷ್ಟೇ ಸಾಲದು. ಸಾರ್ವಜನಿಕವಾಗಿ ಇಂತಹ ವರ್ತನೆ ತೋರಿದ ವ್ಯಕ್ತಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಪೊಲೀಸ್ ತನಿಖೆ ನಡೆಯಬೇಕು ಎಂದೂ ಶಾಸಕರು ಆಗ್ರಹಿಸಿದ್ದಾರೆ.