ಸೋಮವಾರಪೇಟೆ, ಮಾ. 15: ಮೀನುಗಾರಿಕಾ ಇಲಾಖೆಯ ಮತ್ಸ್ಯವಾಹಿನಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು. ಸಮೀಪದ ಕಲ್ಕಂದೂರು ಗ್ರಾಮದಲ್ಲಿರುವ ಮೀನುಗಾರಿಕಾ ಇಲಾಖಾ ಕಚೇರಿಯಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಫಲಾನುಭವಿಗಳಿಗೆ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಸದಸ್ಯೆ ಹೆಚ್.ಎನ್. ತಂಗಮ್ಮ ಅವರುಗಳು ಸೌಲಭ್ಯಗಳನ್ನು ವಿತರಿಸಿದರು.ಮತ್ಸ್ಯವಾಹಿನಿ ಯೋಜನೆಯಡಿ ದ್ವಿಚಕ್ರ ವಾಹನ ಖರೀದಿಸಿರುವ ಜನಾರ್ಧನಹಳ್ಳಿ ಗ್ರಾಮದ ಶಾಂತಕುಮಾರ್, ಧರ್ಮ ಅವರಿಗೆ ತಲಾ ರೂ. 10 ಸಾವಿರ ಸಹಾಯ ಧನ, ನಾಲ್ಕು ಚಕ್ರ ವಾಹನ ಹೊಂದಿರುವ ಹಾನಗಲ್ಲು ಗ್ರಾಮದ ಶಶಿಕುಮಾರ್ ಮತ್ತು ಗುಡ್ಡೆಹೊಸೂರು ಗ್ರಾಮದ ಕೆ.ಇ. ಜಲೀಲ್ ಅವರುಗಳಿಗೆ ರೂ. 35 ಸಾವಿರ ಸಹಾಯಧನದ ಚೆಕ್ನ್ನು ಜನಪ್ರತಿನಿಧಿಗಳು ವಿತರಿಸಿದರು. ಈ ಸಂದರ್ಭ ತಾ.ಪಂ.ಯ ಎಸ್ಇಪಿ ಯೋಜನೆಯಡಿ 20 ಮಂದಿಗೆ ಹಾಗೂ ಜಿ.ಪಂ.ಯ ಎಸ್ಇಪಿ ಮತ್ತು ಟಿಎಸ್ಪಿ ಯೋಜನೆಯಡಿ ಆಯ್ಕೆಯಾದ 18 ಮಂದಿ ಫಲಾನುಭವಿಗಳಿಗೆ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಉಪಸ್ಥಿತರಿದ್ದರು.