ಮಡಿಕೇರಿ, ಮಾ. 15: ಕೊಡಗು ಜಿಲ್ಲೆಯ ವಿವಿಧ ದೇವಾಲಯಗಳ ವಾರ್ಷಿಕ ಪೂಜಾ ಮಹೋತ್ಸವಗಳ ವಿವರ ಈ ಕೆಳಗಿನಂತಿದೆ.ಜಾತ್ರೋತ್ಸವಕ್ಕೆ ತೆರೆಸೋಮವಾರಪೇಟೆ: ಇಲ್ಲಿನ ಶ್ರೀ ಮುತ್ತಪ್ಪ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯದ ಜಾತ್ರೋತ್ಸವ ಅದ್ದೂರಿ ಆಚರಣೆಯ ಮೂಲಕ ಮಂಗಳವಾರ ತೆರೆ ಕಂಡಿತು.ದೇವಾಲಯದಲ್ಲಿ ಪಯಂಗುತ್ತಿ ಸೇವೆ, ದೈವಗಳ ವೆಳ್ಳಾಟಂ, ವಿವಿಧ ಕೋಲಗಳು ನಡೆದವು. ಸೋಮವಾರ ಸಂಜೆ ದೇವಾಲಯದಿಂದ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಮುತ್ತಪ್ಪ ದೈವದ ಮೊದಲ್ ಕಲಶದ ಮೆರವಣಿಗೆ ನಡೆಯಿತು. ಕೇರಳದ ಪ್ರಖ್ಯಾತ ಸಿಂಗಾರಿ ಮೇಳದೊಂದಿಗೆ ನಡೆದ ಮೆರವಣಿಗೆ ಆಕರ್ಷಣೀಯವಾಗಿತ್ತು. ದೇವಾಲಯದ ವಿವಿಧ ಗುಡಿಗಳಲ್ಲಿ ಪ್ರತಿಷ್ಠಾಪಿಸಿರುವ ಮುತ್ತಪ್ಪ, ತಿರುವಪ್ಪ, ವಿಷ್ಣುಮೂರ್ತಿ, ಕರಿಂಗುಟ್ಟಿ ಶಾಸ್ತವು, ಕಂಡಕರ್ಣ ದೈವ, ಭಗವತಿ ದೇವಿ, ರಕ್ತಚಾಮುಂಡಿ, ಪೊಟ್ಟನ್ ದೈವದ ವೆಳ್ಳಾಟಂ ಹಾಗೂ ಕೋಲಗಳು ನಡೆದವು. ಮಧ್ಯ ರಾತ್ರಿ ದೇವರ ಕಳಿಕ್ಕಾಪಾಟ್ ನಡೆಯಿತು.ಜಾತ್ರೋತ್ಸವದ ಅಂಗವಾಗಿ ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತಾಗಳಿಗೆ ಅನ್ನಸಂತರ್ಪಣಾ ಕಾರ್ಯ ನಡೆಯಿತು. ಸಿಡಿಮದ್ದಿನ ಪ್ರದರ್ಶನ ಜಾತ್ರೋತ್ಸವದ ಆಕರ್ಷಣೀಯವಾಗಿತ್ತು.
ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆದವು. ಮಂಗಳವಾರ ಬೆಳಗ್ಗಿನ ಜಾವ ಪೊಟ್ಟನ್ ದೈವ ಅಗ್ನಿಕೊಂಡಕ್ಕೇರುವ ದೃಶ್ಯ ಸ್ಥಳದಲ್ಲಿದ್ದ ಭಕ್ತರನ್ನು ಮೈನವಿರೇಳಿಸಿತು. ವಿಷ್ಣುಮೂರ್ತಿ, ಕಂಡಕರ್ಣ, ಗುಳಿಗನ್ ದೈವಕ್ಕೆ ಗುರುಶ್ರೀ ದರ್ಪಣ ನಡೆಯುವದರೊಂದಿಗೆ ಜಾತ್ರೋತ್ಸವ ಮುಕ್ತಾಯಗೊಂಡಿತು. ಜಾತ್ರೋತ್ಸವದ ಯಶಸ್ವಿಗಾಗಿ ಅಧ್ಯಕ್ಷ ಎನ್.ಡಿ. ವಿನೋದ್, ಕಾರ್ಯದರ್ಶಿ ಎನ್.ಟಿ. ಪ್ರಸನ್ನ ನಾಯರ್ ನೇತೃತ್ವದಲ್ಲಿ ದೇವಾಲಯ ಸಮಿತಿಯ ಕಾರ್ಯಕರ್ತರು ಶ್ರಮಿಸಿದರು.
ಕಣಿವೆ ಶ್ರೀ ರಾಮಲಿಂಗೇಶ್ವರ ಬ್ರಹ್ಮರಥೋತ್ಸವ
ಕೂಡಿಗೆ: ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ತಾ. 25 ರಂದು ನಡೆಯಲಿದ್ದು, ರಥೋತ್ಸವದ ಅಂಗವಾಗಿ ತಾ. 23 ರಿಂದ 29 ರವರೆಗೆ ವಿವಿಧ ಪೂಜಾ ಕೈಂಕರ್ಯ ನಡೆಯಲಿವೆ.
ತಾ. 23 ರಂದು ಬೆಳಿಗ್ಗೆ ದೇವಾನಾಂದಿ, ಅಂಕುರಾರ್ಪಣ, ರಕ್ಷಾಬಂಧ, ಧ್ವಜಾರೋಹಣ, ನವಗ್ರಹ, ಜಪ, ಅಭಿಷೇಕ, ಪುಣ್ಯಾಹವಾಚನ, ಗಣಪತಿ ಹೋಮ, ದೇವತಾಹ್ವಾನ, ಮಹಾಪೂಜೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆ 6 ಗಂಟೆಯಿಂದ ಸಂಧ್ಯಾಪೂಜೆ, ಪ್ರಸಾದ ವಿನಿಯೋಗ, ರುದ್ರಪೂಜೆ ಕ್ರಮಾರ್ಚನೆ, ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಲಿದ್ದು, ತಾ. 24 ರಂದು ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ನವಗ್ರಹ, ಗಣಪತಿ ಹೋಮ, ಮೃತ್ಯುಂಜಯ ಹೋಮ, ಪೂರ್ಣಾಹುತಿ, ಮಹಾಪೂಜೆ, ನಡೆಯಲಿದೆ. ಸಂಜೆ 7 ಗಂಟೆಗೆ ಸೀತಾ ಕಲ್ಯಾಣೋತ್ಸವ, ಮಹಾಪೂಜೆ ನಡೆಯಲಿದೆ.
ತಾ. 25 ರ ರಥೋತ್ಸವದಂದು ಪವಿತ್ರ ಗಂಗೋದಕದಿಂದ ಶ್ರೀ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ ನಂತರ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 1.15 ರಿಂದ 2 ರ ಅಭಿಜಿನ್ ಮೂಹೂರ್ತದಲ್ಲಿ ಶ್ರೀ ವೇ.ಬ್ರ. ನರಹರಿಶರ್ಮಾ ಅವರ ನೇತೃತ್ವದಲ್ಲಿ ರಾಮಲಿಂಗೇಶ್ವರ ಸ್ವಾಮಿಯ ರಥಾರೋಹಣ, ಬ್ರಹ್ಮರಥೋತ್ಸವವು ನಡೆಯಲಿದೆ. ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣಾ ಕಾರ್ಯಕ್ರಮ ನಡೆಯಲಿವೆ.
ರಥೋತ್ಸವದ ಅಂಗವಾಗಿ ಪ್ರತಿದಿನ ಸಂಜೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವಾಲಯದ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಉತ್ಸವ ಮೆರವಣಿಗೆ, ಆಂಜನೇಯೋತ್ಸವ ಮೆರವಣಿಗೆ, ಉಯ್ಯಾಲೋತ್ಸವ ಸೇರಿದಂತೆ ಆಕರ್ಷಕ ಮದ್ದುಗುಂಡು ಪ್ರದರ್ಶನ, ತೆಪ್ಪೋತ್ಸವ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ರಥೋತ್ಸವದಂದು ಸಂಜೆ ಕೂಡುಮಂಗಳೂರು ಪಣವಂ ನಾಟ್ಯಾಲಯದಿಂದ ಭರತನಾಟ್ಯ, ಭಕ್ತಿಗೀತೆ, ಜಾನಪದ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ದಿನಂಪ್ರತಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ರವಿ ಝೇಂಕಾರ್ ವಾದ್ಯಗೋಷ್ಠಿ ಆರ್ಕೇಸ್ಟ್ರಾದಿಂದ ರಸಮಂಜರಿ ಕಾರ್ಯಕ್ರಮ, ಕುಶಾಲನಗರ ಡ್ರೀಮ್ ಡ್ಯಾನ್ಸ್ ಗ್ರೂಪ್ ತಂಡದಿಂದ ನೃತ್ಯ ಕಾರ್ಯಕ್ರಮ ಹಾಗೂ ಹಾಸನ ಮೋಹನ್ ಮೆಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯದ ಸಮಿತಿಯ ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ.
ಕಾಡ್ಲಯ್ಯಪ್ಪ ಉತ್ಸವ
ಗೋಣಿಕೊಪ್ಪಲು: ಅರ್ವತ್ತೋಕ್ಲು ಗ್ರಾಮದ ಶ್ರೀ ಕಾಡ್ಲಯ್ಯಪ್ಪ ದೇವರ ಉತ್ಸವ ತಾ. 17 ಮತ್ತು 18 ರಂದು ನಡೆಯಲಿದೆ. ತಾ. 17 ರಂದು ಸಂಜೆ 4 ಗಂಟೆಗೆ ತಕ್ಕಮುಖ್ಯಸ್ಥರಾದ ಕಾಡ್ಯಮಾಡ ಐನ್ಮನೆಯಿಂದ ದೇವರ ಭಂಡಾರವನ್ನು ತೆಗೆದುಕೊಂಡು ಹೋಗುವದು, 5.30 ಗಂಟೆಗೆ ಕಟ್ಟು ತೆಗೆಯುವದು, ತಾ. 18 ರಂದು ಬೆಳಿಗ್ಗೆ 7.45 ಗಂಟೆಗೆ ಹೊಂಡ ಹಾಯುವದು, ದೈವಿಕ ಕಾರ್ಯಗಳು ನಡೆಯಲಿವೆ ಎಂದು ಕಾಡ್ಲಯ್ಯಪ್ಪ ದೇವಾಲಯದ ತಕ್ಕಮುಖ್ಯಸ್ಥರು ಮತ್ತು ಆಡಳಿತ ಮಂಡಳಿ ತಿಳಿಸಿದೆ.
ವಾರ್ಷಿಕ ತೆರೆ ಉತ್ಸವ
ಸಿದ್ದಾಪುರ: ಸಿದ್ದಾಪುರದ ಹೈಸ್ಕೂಲ್ ಪೈಸಾರಿಯಲ್ಲಿರುವ ಶ್ರೀ ಭದ್ರಕಾಳಿ ದೇವಾಲಯದ 29ನೇ ವರ್ಷದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ತಾ. 20 ರಿಂದ 22 ರವರೆಗೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನಡೆಯಲಿದೆ.
ತಾ. 20 ರಂದು ಸಂಜೆ 4.30ಕ್ಕೆ ಅಶ್ವಥೀ ಪೂಜೆಯೊಂದಿಗೆ ಶ್ರೀ ದೇವಿಯ ತೆರೆ ಮಹೋತ್ಸವ ಪ್ರಾರಂಭವಾಗಲಿದೆ. ತಾ. 21 ರಂದು ಬೆಳಗಿನ ಜಾವ 5ಕ್ಕೆ ಶ್ರೀ ಭದ್ರಕಾಳಿ ಹಾಗೂ ರಕ್ತೇಶ್ವರಿದೇವಿಯ ಮಹಾಪೂಜೆ, ಮಧ್ಯಾಹ್ನ 12 ಗಂಟೆಗೆ ಗುರುಧಿಸಮರ್ಪಣೆ, ಅಪರಾಹ್ನ 2ಕ್ಕೆ ಅನ್ನಸಂತರ್ಪಣೆ, ರಾತ್ರಿ 7ಕ್ಕೆ ಶ್ರೀ ವಸೂರಿಮಾಲ ದೇವಿಯ ಕೋಲವು ಅಲಂಕಾರ ವಾದ್ಯಗೋಷ್ಠಿಯೊಂದಿಗೆ ಕಾವೇರಿ ನದಿಯಿಂದ ದೇವಾಲಯದವರೆಗೆ ಮೆರವಣಿಗೆಯಲ್ಲಿ ಕರೆತರಲಾಗುವದು. ರಾತ್ರಿ. 9ಕ್ಕೆ ವಸೂರಿಮಾಲ ತೆರೆ, 10ಕ್ಕೆ ಅನ್ನಸಂತರ್ಪಣೆ, 12ಕ್ಕೆ ಗುಳಿಗಪ್ಪನ ವೆಳ್ಳಾಟಂ, ರಾತ್ರಿ 1ಕ್ಕೆ ಮಹಾರಕ್ತೇಶ್ವರಿ ಮಹಾಗುರುಧಿಪೂಜೆ, ಪ್ರಾತಃಕಾಲ 3ಕ್ಕೆ ಕುಟ್ಟಿಚಾತನ ತೆರೆ, ಬೆಳಗಿನ ಜಾವ 6ಕ್ಕೆ ಗುಳಿಗಪ್ಪನ ತೆರೆ.
ತಾ. 22 ರಂದು ಬೆಳಿಗ್ಗೆ 8ಕ್ಕೆ ಮಹಾರಕ್ತೇಶ್ವರಿ ದೇವಿಯ ತೆರೆ, 10ಕ್ಕೆ ಮಹಾರಕ್ತೇಶ್ವರಿ ದೇವಿಯ ಮಹಾಗುರುಧಿ ಸಮರ್ಪಣೆ, 11ಕ್ಕೆ ಶ್ರೀ ಭಗವತಿ ತೆರೆ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ಸತ್ಯನಾರಾಯಣ ದೇವರ ವಾರ್ಷಿಕೋತ್ಸವ
ಸಿದ್ದಾಪುರ: ಇತಿಹಾಸ ಪ್ರಸಿದ್ಧ ನೆಲ್ಲಿಹುದಿಕೇರಿ ಗ್ರಾಮದ ಶ್ರೀ ಸತ್ಯನಾರಾಯಣ ದೇವರ ವಾರ್ಷಿಕೋತ್ಸವ ಕಾರ್ಯಕ್ರಮ ತಾ. 19 ರಿಂದ 21 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ತಾ. 19 ರಂದು ಸಂಜೆ 6.30 ಗಂಟೆಗೆ ತಕ್ಕರ ಮನೆಯಿಂದ ಭಂಡಾರ ಇಳಿಸುವದು. 7 ಗಂಟೆಗೆ ಶುದ್ಧ ಕಲಶ, ದೇವರ ಬಲಿ ಬರುವದು, ಅನ್ನಸಂತರ್ಪಣೆ.
ತಾ. 20 ರಂದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಪಟ್ಟಣಿ ಪೊದಮ್ಮ ದೇವಸ್ಥಾನದಲ್ಲಿ, ಸಂಜೆ 5 ಗಂಟೆಗೆ ಅಕ್ಕಿಹೇರುವದು, ದೇವರ ಮೆರವಣಿಗೆ ಹಾಗೂ ಮಹಾಪೂಜೆ ಮಂಗಳಾರತಿ. ತಾ. 21 ರಂದು ಬೆಳ್ಳಿಗೆ 9.30ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, 1.30ಕ್ಕೆ ಮಹಾಪೂಜೆ, 2 ಗಂಟೆಗೆ ಅನ್ನ ಸಂತರ್ಪಣೆ, ಸಂಜೆ 4 ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವದು, 5 ಗಂಟೆಗೆ ದೇವರು ಜಳಕಕ್ಕೆ ಹೊರಡುವದು, ಸಂಜೆ 7.30ಕ್ಕೆ ದೇವರ ಪ್ರದಕ್ಷಿಣೆ, ರಾತ್ರಿ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ, ದೇವಸ್ಥಾನದಿಂದ ಭಂಡಾರ ತಕ್ಕರ ಮನೆಗೆ ತಲಪಿಸುವದು. ತಾ. 22 ರಂದು ಬೆಳ್ಳಿಗೆ 10.30 ಗಂಟೆಗೆ ಶುದ್ಧ ಕಲಶ, ಮಹಾಪೂಜೆ, ಮಧ್ಯಾಹ್ನ 1ಕ್ಕೆ ಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ
ಸುಂಟಿಕೊಪ್ಪ: ಇಲ್ಲಿನ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ ಸಮಿತಿ ವತಿಯಿಂದ ಮುತ್ತಪ್ಪ ದೇವರ ವೆಳ್ಳಾಟಂ ಅಂಗವಾಗಿ ಬೆಳಿಗ್ಗೆ ಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನದ ಮುಖ್ಯ ಅರ್ಚಕ ಮಂಜುನಾಥ್ ಉಡುಪ ಮತ್ತು ಮಂಜುನಾಥ್ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಪೂರ್ಣ ಕುಂಭ ಕಲಶ, ಶುದ್ಧಿ ಪುಣ್ಯಾಹ, ಸತ್ಯ ನಾರಾಯಣ ಪೂಜೆ ನಡೆಯಿತು. ಸಂಜೆ ಮುತ್ತಪ್ಪ ದೇವರ ಮಲೆ ಇಳಿಸುವಿಕೆಯ ನಂತರ ವಿವಿಧ ಪೂಜೆಗಳು ನಡೆದು ನಂತರ ರಾತ್ರಿ 10.30 ರವರೆಗೆ ಮುತ್ತಪ್ಪ ದೇವರ ವೆಳ್ಳಾಟಂ ನಡೆಯಿತು. ದೇವರ ತೆರೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮದ ನೂರಾರು ಭಕ್ತರು ಆಗಮಿಸಿದ್ದರು. ನಂತರ ಸಿಡಿಮದ್ದು ಪ್ರದರ್ಶನ ನಡೆಯಿತು. ಮಹಾಪೂಜೆ, ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ಮಂಗಳವಾರ ಬೆಳಿಗ್ಗೆಯಿಂದ ದೇವಿಗೆ ಅರ್ಪಣೆ ಮತ್ತು ಅನ್ನಸಂತರ್ಪಣೆ ನಡೆಸಲಾಯಿತು.