ಮಡಿಕೇರಿ, ಮಾ. 15: ನಿನ್ನೆ ಸಂಜೆ, ರಾತ್ರಿ ಹಾಗೂ ಇಂದು ಕೂಡ ಜಿಲ್ಲೆಯ ಹಲವೆಡೆ ಮಳೆಯಾಗುವದÀ ರೊಂದಿಗೆ ಭುವಿಯನ್ನು ವರುಣ ತಂಪಾಗಿಸಿದ್ದಾನೆ. ಇಂದು ಸಂಜೆ ಮಾದಾಪುರ ವ್ಯಾಪ್ತಿಯಲ್ಲಿ ಒಂದು ಇಂಚಿಗೂ ಅಧಿಕ ಮಳೆಯಾಗಿದೆ. ಕುಶಾಲನಗರ ಸುತ್ತಮುತ್ತ ನಿನ್ನೆ ಹಾಗೂ ಇಂದು ಗಾಳಿ ಸಹಿತ ಮಳೆಯಾಗಿದೆ. ಸೋಮವಾರಪೇಟೆ, ಶನಿವಾರಸಂತೆ ಸುತ್ತಮುತ್ತ ಅರ್ಧಗಂಟೆ ಉತ್ತಮ ಮಳೆಯಾಗಿದೆ.ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ನಾಪೋಕ್ಲು, ಭಾಗಮಂಡಲ, ಸಂಪಾಜೆ, ಶ್ರೀಮಂಗಲ, ವೀರಾಜಪೇಟೆ, ಶಾಂತಳ್ಳಿ ಮುಂತಾದೆಡೆಗಳಲ್ಲಿ ವರುಣ ಕೃಪೆದೋರುವದರೊಂದಿಗೆ ಭೂಮಿಯನ್ನು ತಂಪಾಗಿಸಿರುವ ಕುರಿತು ಮಾಹಿತಿ ಲಭಿಸಿದೆ. ಕೂಡಿಗೆ ಬಳಿ ಬ್ಯಾಡಗೊಟ್ಟ ನಿರಾಶ್ರಿತರ ಶಿಬಿರದ ಮಾಡುವಿನ ಸೀಟ್‍ಗಳು ಗಾಳಿಗೆ ಹಾರಿಹೋಗಿದ್ದು, ವ್ಯಕ್ತಿಯೊಬ್ಬ ಗಾಯಗೊಂಡ ಘಟನೆ ನಡೆದಿದೆ. ಮೂರು ಮರಗಳು ಧರೆಗುರುಳಿದ್ದು, ರಸ್ತೆಗಳಲ್ಲಿ ನೀರು ತುಂಬಿಕೊಂಡಿರುವ ದೃಶ್ಯ ಎದುರಾಯಿತು. ಕೂಡಿಗೆ ಆರೋಗ್ಯ ಕೇಂದ್ರ ಬಳಿ ಜಲಾವೃತ ಎದುರಾಯಿತು.

ಸೋಮವಾರಪೇಟೆ : ಇಂದು ಸಂಜೆ ವೇಳೆಗೆ (ಮೊದಲ ಪುಟದಿಂದ) ಸೋಮವಾರಪೇಟೆ ವಿಭಾಗಕ್ಕೆ ಧಾರಾಕಾರ ಮಳೆ ಸುರಿಯಿತು. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದ ಸೋಮವಾರಪೇಟೆಯಲ್ಲಿ ಮಧ್ಯಾಹ್ನ ತುಂತುರು ಮಳೆಯಾಯಿತು.ಸಂಜೆ 5 ಗಂಟೆ ಸುಮಾರಿಗೆ ಧಾರಾಕಾರ ಮಳೆ ಸುರಿದಿದ್ದರಿಂದ ಕರ್ತವ್ಯ ಮುಗಿಸಿ ಮನೆಕಡೆ ಹೊರಟಿದ್ದ ಜನಸಾಮಾನ್ಯರು ಪರದಾಡಿದರು. ಗುಡುಗು ಮಿಂಚಿನೊಂದಿಗೆ ಸುರಿದ ಮಳೆ, ಕೆಲಕಾಲ ಜನಜೀವನವನ್ನು ಅಸ್ತವ್ಯಸ್ತವನ್ನಾಗಿಸಿತು.

ಸೋಮವಾರಪೇಟೆ ಪಟ್ಟಣ ಸೇರಿದಂತೆ ಶಾಂತಳ್ಳಿ, ಗೌಡಳ್ಳಿ, ಬೇಳೂರು, ಬಾಣಾವರ, ಮಾದಾಪುರ, ಐಗೂರು, ಕಿರಗಂದೂರು, ತೋಳೂರುಶೆಟ್ಟಳ್ಳಿ ಭಾಗದಲ್ಲೂ ಮಳೆಯಾಯಿತು. ನಿನ್ನೆ ಸಂಜೆ ಮತ್ತು ಇಂದು ಸುರಿದ ಮಳೆಗೆ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿಯಲ್ಲಿ ಸಾರ್ವಜನಿಕ ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯಿತು.

ಕಾಂಕ್ರೀಟ್ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿರುವ ಹಿನ್ನೆಲೆ ಪ್ರಥಮ ಮಳೆಗೆ ಕೊಳಚೆ ಹಾಗೂ ಕೆಸರು ಚರಂಡಿಯಲ್ಲಿ ಹರಿಯದೇ ರಸ್ತೆಯಲ್ಲಿ ನಿಂತಿದೆ. ಇದರಿಂದ ಇಡೀ ಪ್ರದೇಶ ಕೆಸರುಮಯವಾಗಿದ್ದು, ನಡೆದಾಡಲೂ ಕಷ್ಟವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಬಜೆಗುಂಡಿ ಗ್ರಾಮದ ರವೀಂದ್ರ, ರಾಜಾ, ಪ್ರಸಾದ್ ಸೇರಿದಂತೆ ಇತರರ ಮನೆ ಎದುರು ಕೆಸರಿನ ಕೂಪವೇ ನಿರ್ಮಾಣವಾಗಿದ್ದು, ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಯಿತು. ಇದೇ ರೀತಿಯ ಸಮಸ್ಯೆ ಇತರೆಡೆಯೂ ಕಂಡುಬಂದಿತು. ಮಳೆಯಿಂದಾಗಿ ಸಾರ್ವಜನಿಕ ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಯ ಮೇಲೆಯೇ ಹರಿಯಿತು.