ಕೂಡಿಗೆ, ಮಾ. 16 : ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಸುರಿದ ಮಳೆ ಹಾಗೂ ಗಾಳಿಯಿಂದಾಗಿ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್‍ಗಳ ಶೀಟ್‍ಗಳು ಹಾಗೂ ಸಮುದಾಯ ಭವನದ ಸಿಮೆಂಟ್ ಶೀಟ್‍ಗಳು ಹಾರಿ ಮನೆಯ ವಸ್ತುಗಳಿಗೆ ಹಾನಿಯಾಗಿದೆ. ಶೀಟ್‍ಗಳು ಪುಡಿಯಾಗಿದ್ದು, ತಾತ್ಕಾಲಿಕ ಶೆಡ್‍ನ ಒಳಗೆ ನೀರು ನುಗ್ಗಿ ಆಹಾರ ವಸ್ತುಗಳಿಗೂ ಹಾನಿಯಾಗಿದ್ದು, ರಾತ್ರಿಯಿಡಿ ಮಲಗಲು ಪರದಾಡುವಂತಾಗಿತ್ತು.

ಹಾನಿಗೊಳಗಾದ ಪ್ರದೇಶಕ್ಕೆ ತಾಲೂಕು ದಂಡಾಧಿಕಾರಿ ಮಹೇಶ್, ಗ್ರಾಮ ಲೆಕ್ಕಿಗ ಸಚಿನ್, ಕೂಡಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಲೀಲ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರಿಪಡಿಸಲು ಆಗ್ರಹ : ಎರಡು ದಿನಗಳಿಂದ ಸುರಿದ ಮಳೆ ಹಾಗೂ ಗಾಳಿಯಿಂದಾಗಿ ಈಗಾಗಲೇ ತಾತ್ಕಾಲಿಕ ಶೆಡ್‍ಗಳ ಮೇಲೆ ಅಳವಡಿಸಿದ್ದ ಶೀಟ್‍ಗಳು ಪುಡಿಪುಡಿಯಾಗಿದ್ದು, ನಮಗೆ ವಾಸಿಸಲು ಅನುಕೂಲವಾಗುವಂತೆ ತುರ್ತಾಗಿ ಶೀಟ್‍ಗಳನ್ನು ಹಾಗೂ ಬಾಗಿಲುಗಳನ್ನು ಅಳವಡಿಸುವ ವ್ಯವಸ್ಥೆ ಮಾಡಬೇಕು ಎಂದು ಹಾಡಿಯ ನಿವಾಸಿಗಳು ಆಗ್ರಹಿಸಿದರು.

ಬ್ಯಾಡಗೊಟ್ಟದಲ್ಲಿರುವ 358 ಕುಟುಂಬಗಳಿಗೆ ಈಗ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಲಾಗಿದೆ. ಈ ಮನೆಗಳಿಗೆ ಇದುವರೆಗೂ ಬಾಗಿಲನ್ನು ನಿರ್ಮಿಸಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಮೂಲಕ ಭೂ ಸೇನಾ ನಿಗಮದವರಿಗೆ ಗುತ್ತಿಗೆ ನೀಡಿದ್ದರಿಂದ ವ್ಯವಸ್ಥಿತವಾಗಿ ಶೆಡ್‍ಗಳನ್ನು ನಿರ್ಮಾಣ ಮಾಡಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ಬ್ಯಾಡಗೊಟ್ಟದಲ್ಲಿ ಆದಿವಾಸಿಗಳು ಬಂದು ಹಲವಾರು ತಿಂಗಳುಗಳೇ ಕಳೆದರೂ ತಾತ್ಕಾಲಿಕ ಮನೆಗಳಿಗೆ ಬಾಗಿಲು ಆಗಿಲ್ಲ. ಅಲ್ಲದೆ, ಶಾಶ್ವತ ಮನೆಗಳ ನಿರ್ಮಾಣದ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಗಳಿಗೆ ಬೇಕಾದ ಕಚ್ಚಾವಸ್ತುಗಳ ಕೊರತೆ ಎದ್ದುಕಾಣುತ್ತಿದೆ ಎಂದು ಆರೋಪಿಸಿದರು.

ಈ ಕೇಂದ್ರಕ್ಕೆ ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸರಕಾರದ ಹಣವನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮನಬಂದಂತೆ ಉಪಯೋಗಿಸಿ ಕಳಪೆ ಕಾಮಗಾರಿ ನಡೆಸಿದ ಪರಿಣಾಮ ಶೀಟ್‍ಗಳು ಹಾಗೂ ಸಮುದಾಯ ಭವನದ ಶೀಟ್‍ಗಳು ಗಾಳಿ ಮಳೆಯಿಂದ ಹಾನಿಗೊಳಗಾಗಿವೆ ಎಂದರು.

ಕಳಪೆ ಕಾಮಗಾರಿ ನಡೆಸಿ ಹಣ ದುರುಪಯೋಗ ಮಾಡಿರುವ ಹಿನ್ನೆಲೆಯಲ್ಲಿ ಗಿರಿಜನ ಹಾಡಿಯ ಜನರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಎಸ್.ಎನ್. ರಾಜಾರಾವ್ ಹಾಗೂ ಗಿರಿಜನ ಮುಖಂಡರಾದ ಮಲ್ಲಪ್ಪ, ಮೋಹನ, ಅಪ್ಪು, ಸುಬ್ಬಣ್ಣ, ಗಿರಿ, ಸ್ವಾಮಿ ಅವರು ತಿಳಿಸಿದ್ದಾರೆ.