ವೀರಾಜಪೇಟೆ, ಮಾ. 15: ಹುಟ್ಟು ಮತ್ತು ಸಾವಿನ ನಡುವೆ ಇರುವ ಜೀವನ ಕಾನೂನು ರೀತಿಯಲ್ಲಿರಬೇಕು. ಗೊತ್ತು ಗುರಿ ಇಲ್ಲದ ಜೀವನಕ್ಕೆ ಯಾವದೇ ಅರ್ಥ ಇಲ್ಲ ಎಂದು 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಪ್ರಭು ಹೇಳಿದರು. ತಾಲೂಕು ಆಡಳಿತ ಹಾಗೂ ವೀರಾಜಪೇಟೆ ಕಾನೂನು ಸೇವೆಗಳ ಸಮಿತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ರಾಹಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಯಾವದೇ ತಪ್ಪು ಮಾಡಬಾರದೆಂದರೆ ನಾವು ಕಾನೂನನ್ನು ಅರಿತುಕೊಳ್ಳಬೇಕು. ಮೊದಲು ನಾವು ನಮ್ಮ ಮನಸ್ಥಿತಿಯನ್ನು ತಿಳಿದುಕೊಳ್ಳಬೇಕು. ವಿಶ್ವಾಸ ಬೇರೆ, ವ್ಯಾಪಾರ ಬೇರೆ. ಯಾವದೇ ಪದಾರ್ಥವನ್ನು ಕೊಂಡುಕೊಂಡರೆ ರಶೀದಿ ಪಡೆದುಕೊಳ್ಳಿ. ಪದಾರ್ಥ ಸರಿ ಇಲ್ಲ ಎಂದಾದರೆ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಬಹುದು. ದಾಖಲೆಗಳಿಲ್ಲದಿದ್ದರೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.

ಅಡಿಷನಲ್ ನ್ಯಾಯಾಲಯದ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಬಿ.ಕೆ. ಮನು ಮಾತನಾಡಿ ಅಂಗಡಿಯಿಂದ ಪಡೆದುಕೊಂಡ ಪದಾರ್ಥ ಸರಿ ಇಲ್ಲದಿದ್ದರೆ ಪ್ರಕರಣವನ್ನು ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದಾಖಲಿಸಬಹುದು. ಅಲ್ಲಿ ಸಿಗುವ ನ್ಯಾಯದ ಮೇಲೆ ನಿಮಗೆ ನಂಬಿಕೆ ಇಲ್ಲದಿದ್ದರೆ ರಾಜ್ಯ ಹಾಗೂ ರಾಷ್ಟ್ರೀಯ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿಕೊಳ್ಳಬಹುದು. ನ್ಯಾಯಾಲ ಯದ ಆದೇಶವನ್ನು ಉಲ್ಲಂಘಿಸಿದರೆ 2 ಸಾವಿರದಿಂದ 10 ಸಾವಿರ ದಂಡ ಹಾಗೂ ಮೂರು ವರ್ಷಗಳ ಸೆರೆ ವಾಸವಿದೆ. ಹಿಂದೆ ನಾವೇ ಪದಾರ್ಥ ಗಳ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು. ಕಾನೂನು ಬದಲಾಗಿ ಮಾರಾಟಗಾರರೆ ಎಚ್ಚರಿಕೆ ವಹಿಸಿ ಮಾರಾಟ ಮಾಡಬೇಕಿದೆ ಎಂದು ಹೇಳಿದರು.

ವಕೀಲ ಬಿ.ಬಿ ಮಾದಪ್ಪ ಗ್ರಾಹಕರ ದಿನಾಚರಣೆಯ ಬಗ್ಗೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಕರ್ನಾಟಕ ವಾಣಿಜ್ಯ ಮಹಾ ಮಂಡಳಿ ಹಾಗೂ ಪ್ರವಾಸೋದ್ಯಮ ನಿಗಮದ ನಿರ್ದೇಶಕ ಗಿರೀಶ್ ಗಣಪತಿ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ, ಜಿಲ್ಲಾ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಿ.ಎಂ. ಪ್ರಕಾಶ್, ವೀರಾಜಪೇಟೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾದಪ್ಪಂಡ ಕಾಶಿ ಕಾವೇರಪ್ಪ, ಖಜಾಂಜಿ ಅಮ್ಮಣಿಚಂಡ ರವಿ ಉತ್ತಪ್ಪ, ಶಿರಸ್ತೆದಾರ್ ಕೆ.ಎಂ. ಚಿಣ್ಣಪ್ಪ ಉಪಸ್ಥಿತರಿದ್ದರು.

ಬಿ.ಎನ್. ಪ್ರಕಾಶ್ ಸ್ವಾಗತಿಸಿದರು ರವಿ ಉತ್ತಪ್ಪ ವಂದಿಸಿದರು.