ಸೋಮವಾರಪೇಟೆ, ಮಾ. 15: ತಾಲೂಕಿನ ಶಾಂತಳ್ಳಿ ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕೆ.ಎಂ. ಕೃಷ್ಣಕುಮಾರ್ ಅವರು ಆಯ್ಕೆಯಾಗಿದ್ದಾರೆ.

ಶಾಂತಳ್ಳಿಯ ಶ್ರೀಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕಲಿಗ ಸಮುದಾಯ ಬಾಂಧವರ ಸಭೆಯಲ್ಲಿ ನೂತನವಾಗಿ ಸಂಘವನ್ನು ರಚಿಸಲಾಯಿತು.

ಸಂಘದ ಉಪಾಧ್ಯಕ್ಷರುಗಳಾಗಿ ಶಾಂತಳ್ಳಿಯ ಎಸ್.ಬಿ. ರಾಜಪ್ಪ, ಜಿ.ಎಂ. ಸುಶೀಲ, ಬೆಟ್ಟದಳ್ಳಿಯ ಬಿ.ಎಸ್. ಸುರೇಶ್, ತೋಳೂರು ಶೆಟ್ಟಳ್ಳಿಯ ಸಿ.ಎಸ್. ಧರ್ಮಪ್ಪ ಅವರುಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿಯಾಗಿ ಕೆ.ಕೆ. ಗೋಪಾಲ್, ಜಂಟಿ ಕಾರ್ಯದರ್ಶಿಗಳಾಗಿ ಬಿ.ಎ. ಸುರೇಶ, ಜಿ.ಪಿ. ಅರುಣ್, ವಿಠಲ್‍ರಾಜ್, ಖಜಾಂಚಿಯಾಗಿ ತೋಳೂರುಶೆಟ್ಟಳ್ಳಿಯ ಎ.ಎಸ್. ಸುರೇಶ್, ಅವರುಗಳನ್ನು ನೇಮಿಸಲಾಯಿತು.

ನೂತನ ಸಂಘ ರಚನೆ ಸಂಬಂಧ ಕರೆಯಲಾದ ಸಭೆಯ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ವಹಿಸಿ ಮಾತನಾಡಿ, ಸಮುದಾಯ ಬಾಂಧವರನ್ನು ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಕಾರ್ಯ ಸಂಘದಿಂದ ಆಗಬೇಕು ಎಂದು ಅಭಿಪ್ರಾಯಿಸಿದರು.