ಮಡಿಕೇರಿ ಮಾ.15 : ಮಕ್ಕಂದೂರಿನ ದಿ.ಉಗ್ಗಪ್ಪ ಪೂಜಾರಿ ಮತ್ತು ಪಾರ್ವತಿ ಅವರಿಂದ ಸ್ಥಾಪಿತಗೊಂಡ ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಬೈದೇರುಗಳ ಗರಡಿ ಟ್ರಸ್ಟ್ ವತಿಯಿಂದ ತಾ.16 ರಿಂದ (ಇಂದಿನಿಂದ) 18ರ ವರೆಗೆ 34ನೇ ವರ್ಷದ ನೇಮೋತ್ಸವ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಸದಸ್ಯ ವಿಶ್ವ ಮಾತನಾಡಿ, ತಾ. 16 ರಂದು ಬೆಳಗ್ಗೆ 9 ಗಂಟೆಯಿಂದ ನಾಗ ತಂಬಿಲ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ತಾ.17 ರಂದು ಸಂಜೆ 5.12 ಗಂಟೆಗೆ ಭಂಡಾರ ತೆಗೆಯುವದು, ರಾತ್ರಿ 7.37ಕ್ಕೆ ಬೈದೇರುಗಳ ಗರಡಿ ಇಳಿಯುವದು ಮತ್ತು ಹಣ್ಣು ಕಾಯಿ ಸ್ವೀಕರಿಸಲಾಗುವದು ಎಂದು ಮಾಹಿತಿ ನೀಡಿದರು.

ರಾತ್ರಿ 12.45 ರಿಂದ 1.30 ಗಂಟೆವರೆಗೆ ಕಿನ್ನಿದಾರು ರಂಗಸ್ಥಳ ಪ್ರವೇಶಿಸಲಿದ್ದು, 18 ರಂದು ಬೆಳಿಗ್ಗೆ 1.30ಕ್ಕೆ ಕೋಟಿಚೆನ್ನಯ್ಯರ ದರ್ಶನ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಭಂಡಾರ ಕಾಣಿಕೆ, ಗಂಧ ಪ್ರಸಾದ ಸ್ವೀಕಾರ ನಡೆಯಲಿದೆ ತಿಳಿಸಿದರು.

ಶ್ರೀ ಕೋಟಿಚೆನ್ನಯ್ಯ ಬೈದೇರುಗಳ ಗರಡಿ ಟ್ರಸ್ಟ್ 24 ಸದಸ್ಯರನ್ನು ಹೊಂದಿದೆ. ಕಳೆದ 33 ವರ್ಷಗಳಿಂದ ನೇಮೋತ್ಸವ ನಡೆಸಿಕೊಂಡು ಬರಲಾಗುತ್ತಿದ್ದು, ಕೊಡಗಿನ ಏಕೈಕ ತುಳುಭಾಷಿಕರ ಹಬ್ಬವಾಗಿದೆ. ಕೋಟಿಚೆನ್ನಯ್ಯ ತುಳುನಾಡಿನಲ್ಲಿ ಶೋಷಿತ ವರ್ಗದವರ ಪರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದು, 500 ವರ್ಷಗಳ ಇತಿಹಾಸವನ್ನು ಹೊಂದಿದೆ. ಕೋಟಿಚೆನ್ನಯ್ಯ ಬೈದೇರುಗಳ ದರ್ಶನಕ್ಕೆ ಕೊಡಗಿನಿಂದ ಮಾತ್ರವಲ್ಲದೆ ಪುತ್ತೂರು, ಸುಳ್ಯ ಸೇರಿದಂತೆ ಇತರ ಕಡೆಗಳಿಂದ ಆಗಮಿಸುತ್ತಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಅಧ್ಯಕ್ಷ ಬಿ.ಎ.ಜನಾರ್ಧನ ಪೂಜಾರಿ, ಕುಟುಂಬದ ಹಿರಿಯರಾದ ಬಿ.ಎ.ಎಲ್ಯಣ್ಣ ಪೂಜಾರಿ, ಸದಸ್ಯರಾದ ಬಿ.ಎ. ಆನಂದ ಹಾಗೂ ಬಿ.ಎ. ಮುತ್ತಣ್ಣ ಉಪಸ್ಥಿತರಿದ್ದರು.