ಮಡಿಕೇರಿ, ಮಾ.14 : ದಕ್ಷಿಣ ಕೊಡಗಿನ ಮೂಲಕ ಹಾದುಹೋಗುವ ಮೈಸೂರು-ತಲಚೇರಿ ರೈಲ್ವೆ ಮಾರ್ಗವನ್ನು ಜಿಲ್ಲೆಯ ಜನತೆಯ ನಿರೀಕ್ಷೆಯಂತೆ ವಿರೋಧಿಸುವ ನೆಪದಲ್ಲಿ ಪರಿಸರವಾದಿಗಳು ಸೂಕ್ಷ್ಮ ಪರಿಸರ ಪ್ರದೇಶವನ್ನು ಯಥಾವತ್ ಜಾರಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಸೇವ್ ಕೊಡಗು ಫೋರಂ ಸಂಘಟನೆಯ ಪದಾಧಿಕಾರಿ ಮಧು ಬೋಪಣ್ಣ ಟೀಕಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರನ್ನು ರೈಲ್ವೆ ಯೋಜನೆ ಬೇಡವೆಂದು ಮನವರಿಕೆ ಮಾಡಲು ಭೇಟಿಯಾಗಿರುವ ಪರಿಸರವಾದಿಗಳು, ಇದರ ಜೊತೆಯಲ್ಲೆ ಕೊಡಗಿನ 55 ಗ್ರಾಮ ಹಾಗೂ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಹಾದು ಹೋಗುವ ಪಶ್ಚಿಮ ಘಟ್ಟದ 56,825 ಚದರ ಕಿ.ಮೀ. ವ್ಯಾಪ್ತಿಯನ್ನು ಯಥಾವತ್ತಾಗಿ ಸೂಕ್ಷ್ಮ ಪರಿಸರ ಪ್ರದೇಶವನ್ನಾಗಿ ಘೋಷಿಸುವಂತೆ ಕೇಂದ್ರಕ್ಕೆ ಒತ್ತಡ ಹೇರಿರುವದಾಗಿ ಆರೋಪಿಸಿದರು.

ರಕ್ಷಿತಾರಣ್ಯದ ಮೂಲಕ ಸಾಗಿ ಹೋಗಬೇಕಾದ ಮೈಸೂರು-ತಲಚೇರಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇರಳ ರಾಜ್ಯದಿಂದ

(ಮೊದಲ ಪುಟದಿಂದ) ಹೆಚ್ಚಿನ ಒತ್ತಡವಿತ್ತಾದರು, ಈ ಸಂಬಂಧ ನಡೆದ ಸರ್ವೇ ಕಾರ್ಯದ ವರದಿಯಲ್ಲಿ, ಯೋಜನೆ ಆರ್ಥಿಕವಾಗಿ ಲಾಭದಾಯಕವಲ್ಲ ಎನ್ನುವದು ಸೇರಿದಂತೆ ವಿವಿಧ ಕಾರಣಗಳನ್ನು ಬೊಟ್ಟು ಮಾಡಿ ಯೋಜನೆಯನ್ನು ತಿರಸ್ಕರಿಸಲಾಗಿದೆ ಯೆಂದು ಮಧು ಬೋಪಣ್ಣ ತಿಳಿಸಿದರು.

ಇದೀಗ ಈ ರೈಲ್ವೆ ಯೋಜನೆ ಯನ್ನು ವಿರೋಧಿಸು ವದನ್ನು ಮುಂದುಮಾಡಿ ಕೊಂಡು ಸೂಕ್ಷ್ಮ ಪರಿಸರ ವಲಯದ ಘೋಷಣೆಗೆ ಕೇಂದ್ರದ ಮೇಲೆ ಒತ್ತಡ ಹೇರುವ ಕಾರ್ಯ ಪರಿಸರವಾದಿ ಗಳಿಂದ ನಡೆಯುತ್ತಿರು ವದಾಗಿ ಆರೋಪಿಸಿದರು.

ಬಿಜೆಪಿ ಸ್ಪಷ್ಟಪಡಿಸಲಿ

ಕರ್ನಾಟಕ ವಿಧಾನ ಸಭಾ ಚುನಾವಣಾ ಹಂತದಲ್ಲಿದ್ದು, ಈ ಹಿನ್ನೆಲೆಯಲ್ಲಿ ಯಾವದೇ ರಾಜಕೀಯ ಪಕ್ಷಗಳು ಕೊಡಗಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನರ ಪರ ವಹಿಸದೆ ಮೌನವಾಗಿ ಉಳಿದಿವೆ. ಪ್ರಸ್ತುತ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ಸೂಕ್ಷ್ಮ ಪರಿಸರ ಪ್ರದೇಶಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಜಿಲ್ಲಾ ಬಿಜೆಪಿ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಕೆಲವು ಸಮಯಗಳ ಹಿಂದೆ ದಕ್ಷಿಣ ಕೊಡಗಿನ ಜನರೊಂದಿಗೆ ತಾವಿರುವದಾಗಿ ತಿಳಿಸಿ ರೈಲ್ವೆ ಯೋಜನೆ ವಿರೋಧಿಸಿ ಜಾಥಾ ಮಾಡಿದ್ದ ಪರಿಸರವಾದಿಗಳು, ರೈತರ ಪ್ರತಿಭಟನೆ ಸಂದರ್ಭ ತಾವು ಜಿಲ್ಲೆಯ ಹಿಡುವಳಿದಾರರಿಗೆ ತೊಂದರೆ ಯಾಗುವ ಯೋಜನೆಗಳನ್ನು ಬೆಂಬಲಿಸುವದಿಲ್ಲವೆಂದು ತಿಳಿಸಿದ್ದರು. ಇದೀಗ ಇದೇ ಮಂದಿ ನವದೆಹಲಿಗೆ ತೆರಳಿ ಸೂಕ್ಷ್ಮ ಪರಿಸರ ಪ್ರದೇಶದ ಜಾರಿಗೆ ಕೇಂದ್ರವನ್ನು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ನಿಲುವನ್ನು ತಿಳಿಸುವಂತೆ ಆಗ್ರಹಿಸಿದರು.

ನೆರವು ಅಗತ್ಯ

ಕೊಡಗು ಜಿಲ್ಲೆಯ ಹವಾಮಾನ ವೈಪರೀತ್ಯಗಳಿಗೆ ಜಾಗತಿಕ ತಾಪಮಾನ ಹೆಚ್ಚಳವೂ ಒಂದು ಕಾರಣವೆಂದು ನುಡಿದ ಮಧು ಬೋಪಣ್ಣ, ಪ್ರಸ್ತುತ ಕೊಡಗಿನ ಬೆಳೆಗಾರರು ತಮ್ಮ ತೋಟಗಳಲ್ಲಿ ಮರಗಳನ್ನು ಬೆಳೆದು ಪರಿಸರ ಸಂರಕ್ಷಣೆಗೆ ಕಾಣಿಕೆಯನ್ನು ನೀಡುತ್ತಿದ್ದಾರೆ. ಇಂತಹ ಪ್ರಯತ್ನಕ್ಕೆ ಕೇಂದ್ರದ ‘ಗ್ರೀನ್ ಫಂಡ್’ ಮೂಲಕ ಅಗತ್ಯ ನೆರವನ್ನು ಒದಗಿಸಬೇಕು. ಈ ಫಂಡ್‍ನಲ್ಲಿ 3 ಬಿಲಿಯನ್ ಹಣವಿದ್ದು, ಇದರ ಪ್ರಯೋಜನ ಕೆಲವೇ ಕೆಲ ದೊಡ್ಡ ತೋಟಗಳ ಮಂದಿ ಪಡೆದುಕೊಳ್ಳುತ್ತಿದ್ದಾರೆ, ಸಣ್ಣ ಬೆಳೆಗಾರರಿಗೆ ಇದರ ಪ್ರಯೋಜನ ದೊರಕುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಸಂಘಟನೆಯ ಪದಾಧಿಕಾರಿ ಜಿನ್ನು ನಾಣಯ್ಯ ಮಾತನಾಡಿ, ಬೆರಳೆಣಿಕೆÉಯ ಪರಿಸರವಾದಿಗಳಿಂದ ಕೊಡಗಿನಲ್ಲಿ ಸಮಸ್ಯೆಗಳು ನಿರ್ಮಾಣವಾಗಿದೆ. ಕಾಡ್ಗಿಚ್ಚು ಜಾಥಾಗಳನ್ನು ಶಾಲಾ ವಿದ್ಯಾರ್ಥಿಗಳ ಮೂಲಕ ಪಟ್ಟಣ ಪ್ರದೇಶಗಳಲ್ಲಿ ನಡೆಸುವ ಈ ಮಂದಿ, ಮೊದಲು ಬೆಂಕಿ ಬಿದ್ದ ಅರಣ್ಯ ಪ್ರದೇಶಗಳಲ್ಲಿ ಅಗ್ನಿಯನ್ನು ಶಮನಗೊಳಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ನುಡಿದರು. ಕಾಫಿ ಧಾರಣೆ ಕುಸಿತ, ಕುಡಿಯುವ ನೀರಿನ ಸಮಸ್ಯೆ ಈ ಯಾವತ್ತೂ ಸಮಸ್ಯೆಗಳ ಬಗ್ಗೆ ಪರಿಸರವಾದಿಗಳಿಗೆ ಯಾವದೇ ಆಸಕ್ತಿ ಇಲ್ಲವೆಂದು ತಿಳಿಸಿದರು. ಬಿರುನಾಣಿಗೆ ತೆರಳಲು ಸಮೀಪದ ಮಾರ್ಗ ವಾಗಿರುವ ಕೂಟಿಯಾಲ ಸೇತುವೆಯ ಹಾದಿ ನಿರ್ಮಾಣಕ್ಕೆ ಇಲ್ಲಿಯವರೆಗೂ ಡೋಂಗಿ ಪರಿಸರವಾದಿಗಳಿಂದಲೆ ಅಡ್ಡಿ ಉಂಟಾಗುತ್ತಿರುವದಾಗಿ ತಿಳಿಸಿದರು.

ಸಂಘÀಟನೆಯ ಪ್ರಮುಖರಾದ ಬಿ.ಟಿ.ದಿನೇಶ್ ಮಾತನಾಡಿ, ಬೆರಳೆಣಿಕೆಯ ಕೆಲವೇ ಕೆಲವು ಡೋಂಗಿ ಪರಿಸರವಾದಿಗಳು ತಮ್ಮ ಹಿಡಿತದಲ್ಲಿ ಕೊಡಗನ್ನು ಇರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಪರಿಸರ ಸಂರಕ್ಷಣೆÉಯ ಹೆಸರಿನಲ್ಲಿ ವಿದೇಶಿ ನೆರವು ಪಡೆದ ಮಂದಿ ಇದೀಗ ದೊಡ್ಡ ಉದ್ಯಮಿಗಳಾಗಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಫೋರಂನ ಪ್ರಮುಖರಾದ ಉದಯ ಶಂಕರ್ ಉಪಸ್ಥಿತರಿದ್ದರು.