ಮಡಿಕೇರಿ, ಮಾ. 14: ಇಲ್ಲಿನ ಕೊಡಗು ಜಿಲ್ಲಾ ಸರಕಾರಿ ಆಸ್ಪತ್ರೆಯ ಮಹತ್ವಾಕಾಂಕ್ಷೆಯ ಸುರಂಗ ಮಾರ್ಗದಲ್ಲಿ ಈಚೆಗೆ ನೂಲಿನ ಗಾತ್ರದ ಬಿರುಕು ಕಾಣಿಸಿಕೊಂಡು, ಆಸ್ಪತ್ರೆಯ ಸಿಬ್ಬಂದಿ ಸಹಿತ ಚಿಕಿತ್ಸೆಗಾಗಿ ಬಂದು ಹೋಗುವ ಮಂದಿ ಈ ಸುರಂಗ ಮಾರ್ಗದಲ್ಲಿ ಸಂಚರಿಸದಂತೆ ನಿರ್ಬಂಧಿಸಲಾಗಿದೆ. ಕೇವಲ ಐದು ವರ್ಷ ಹಿಂದೆ ರೂಪುಗೊಂಡು 3.3.2014 ರಂದು ಉದ್ಘಾಟನೆಗೊಂಡಿರುವ ಈ ಸುರಂಗ ಮಾರ್ಗದ ಬಿರುಕು ಆತಂಕ ಸೃಷ್ಟಿಸಿದೆ.ಅಲ್ಲದೆ ಈಚೆಗೆ ಶಿರಾಡಿಘಾಟ್ ರಸ್ತೆ ಕಾಮಗಾರಿಯ ಪರಿಣಾಮ ಭಾರೀ ವಾಹನಗಳು ಮಡಿಕೇರಿ ಹೆದ್ದಾರಿ ಮಾರ್ಗವಾಗಿ, ಆಸ್ಪತ್ರೆಯ ಈ ಸುರಂಗದ ಮೇಲಿನಿಂದಲೇ ಸಂಚರಿಸುತ್ತಿರುವ ಹಿನ್ನೆಲೆ ಅಪಾಯ ಎದುರಾಗುವದೆಂಬ ಆತಂಕದಿಂದ, ಮಾರ್ಗದ ಎರಡು ಕಡೆಗಳಲ್ಲಿ ಗೇಟ್‍ಗಳಿಗೆ ಬೀಗ ಜಡಿಯಲ್ಪಟ್ಟಿದೆ.

ಇನ್ನು ಇದುವರೆಗೆ ಮಡಿಕೇರಿ ರಸ್ತೆ ಕೂಡ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ಒಳಪಟ್ಟಿದ್ದು, ಪ್ರಸಕ್ತ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಗೊಂಡಿರು ವದಾಗಿ ಗೊತ್ತಾಗಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈ ಬಗ್ಗೆ ಆಸ್ಪತ್ರೆಯ ಒಳ ಸುರಂಗ ಮಾರ್ಗದ ಸುರಕ್ಷತೆ ಕುರಿತು ಅಭಿಪ್ರಾಯ ಕೇಳಲಾಗಿತ್ತು. ಮೂಲಗಳ ಪ್ರಕಾರ ಸ್ವತಃ ಜಿಲ್ಲಾಧಿಕಾರಿಗಳೇ ಮಾಹಿತಿ ಪಡೆದಿದ್ದು, ತಾಂತ್ರಿಕ ಸಲಹೆಗಾರರು ರಸ್ತೆ ಸಂಚಾರದಿಂದ ಸುರಂಗ ಮಾರ್ಗಕ್ಕೆ ಯಾವದೇ ಅಪಾಯ ಇಲ್ಲವೆಂದು ಅಭಿಪ್ರಾಯ ನೀಡಿರುವದಾಗಿ ಗೊತ್ತಾಗಿದೆ. ಹೀಗಾಗಿ ಮತ್ತೆ ಆಸ್ಪತ್ರೆಯ ರೋಗಿಗಳ ಸಹಿತ ವೈದ್ಯ - ಸಿಬ್ಬಂದಿ ಹಾಗೂ ದೈನಂದಿನ ಓಡಾಟಕ್ಕೆ ಇಲ್ಲಿ ಬರುವವರಿಗೆ ಸುರಂಗ ಮಾರ್ಗದಲ್ಲಿ ಸಂಚರಿಸಲು ಒಂದೆರಡು ದಿನಗಳಲ್ಲಿ ಅನುವು ಮಾಡಿಕೊಡಲಾಗುತ್ತದೆ ಎಂದು ಗೊತ್ತಾಗಿದೆ. ಹಾಗೆಯೇ ಸಣ್ಣ ಪುಟ್ಟ ಬಿರುಕುಗಳನ್ನು ತಂತ್ರಜ್ಞರ ಸಲಹೆಯಂತೆ ಈಗಾಗಲೇ ಸರಿಪಡಿಸಲಾಗಿದೆ.

2012-13ರ ವೇಳೆಗೆ ಅಂದು ಸಚಿವರಾಗಿದ್ದ

(ಮೊದಲ ಪುಟದಿಂದ) ಹಾಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ವಿಧಾನಸಣಾ ಅಧ್ಯಕ್ಷರಾಗಿದ್ದ ಇನ್ನೋರ್ವ ಶಾಸಕ ಕೆ.ಜಿ. ಬೋಪಯ್ಯ ಆದ್ಯತೆ ಮೇರೆಗೆ ರೋಗಿಗಳ ಅನುಕೂಲಕ್ಕಾಗಿ ಈ ಸುರಂಗ ಮಾರ್ಗ ಯೋಜನೆ ರೂಪಿಸಿದ್ದಾಗಿದೆ. ಆ ಬಳಿಕ ಹಾಲಿ ಸರಕಾರದ ಅಂದಿನ ಆರೋಗ್ಯ ಸಚಿವ ಯು.ಟಿ. ಖಾದರ್ ಈ ಮಾರ್ಗ ಉದ್ಘಾಟಿಸಿದ್ದರು.

ಈಗಿನ ರಸ್ತೆಯ ಕೆಳಭಾಗದ ಸುರಂಗವನ್ನು ಕರ್ನಾಟಕ ಹೆದ್ದಾರಿ ಪ್ರಾಧಿಕಾರ ನಿರ್ವಹಿಸಿದ್ದು, ಇನ್ನೊಂದೆಡೆಯಲ್ಲಿ ಹೆದ್ದಾರಿ ಮಧ್ಯಭಾಗದ ಸುರಂಗಕ್ಕೆ ಸಂಪರ್ಕ ಜೋಡಾಣೆಯನ್ನು ಕರ್ನಾಟಕ ಆರೋಗ್ಯ ಇಲಾಖೆಯ ಕಟ್ಟಡ ನಿರ್ಮಾಣ ವಿಭಾಗದಿಂದ ಎರಡು ಕಡೆ ಕಾಮಗಾರಿ ಕೈಗೊಂಡಿದ್ದಾಗಿದೆ. ಇಲ್ಲಿ ಪ್ರಾರಂಭದಿಂದಲೂ ಆಸ್ಪತ್ರೆ ಕಟ್ಟಡದ ಮುಖ್ಯ ದ್ವಾರದ ಒಳ ಸುರಂಗ ಸಂಪರ್ಕ ಮಾರ್ಗ ಹಾಗೂ ಇನ್ನೊಂದೆಡೆ ಹೆರಿಗೆ ವಿಭಾಗದ ಸಂಪರ್ಕ ದ್ವಾರಕ್ಕೂ ನಡುವೆ ಸಮರ್ಪಕ ಜೋಡಣೆಯಲ್ಲಿ ಸಮಸ್ಯೆ ಎದುರಾದಂತಿದೆ. ಪ್ರಸಕ್ತ ಕೂಡ ಅದೇ ಹೆದ್ದಾರಿಯ ಕೆಳಭಾಗದಲ್ಲೇ ಬಿರುಕು ಕಾಣಿಸಿಕೊಂಡು ಪ್ಲಾಸ್ಟರ್ ಮಾಡಿ ದುರಸ್ತಿಗೊಳಿಸಲಾಗಿದೆ. ರೂ. ಒಂದು ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಎಲ್ಲೋ ಲೋಪದೊಂದಿಗೆ ಆತಂಕ ಸೃಷ್ಟಿಯಾಗಿರುವದು ದುರಂತವಷ್ಟೆ. -ಶ್ರೀಸುತ