ಸಿದ್ದಾಪುರ, ಮಾ. 14: ಕಾಡಾನೆಗಳ ಹಾವಳಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮೂರು ಕಾಡಾನೆಗಳನ್ನು ಸೆರೆಹಿಡಿಯಲು ಸರ್ಕಾರದ ಅನುಮತಿ ದೊರೆತಿದ್ದು, ಶೀಘ್ರದಲ್ಲೇ ಆನೆಗಳನ್ನು ಸೆರೆಹಿಡಿಯಲಾಗುವೆಂದು ರಾಜ್ಯ ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಸಿಂಗ್ ತಿಳಿಸಿದ್ದಾರೆ.

ಇತ್ತೀಚೆಗೆ ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಸೇರಿರುವ ದುಬಾರೆ ಹಾಗೂ ಮಾಲ್ದಾರೆ ಸಮೀಪದ ಗದ್ದಿಗೆಬೆಟ್ಟ ಹಾಗೂ ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಹರಡಿ ಬೆಂಕಿಯು ಅರಣ್ಯ ಪ್ರದೇಶದೊಳಗೆ ವ್ಯಾಪಿಸಿ ಅರಣ್ಯದಲ್ಲಿ ಗಿಡಗಳು ನಾಶಗೊಂಡಿತ್ತು. ಈ ಹಿನ್ನೆಲೆಯಲ್ಲಿ ದುಬಾರೆಯ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ನಂತರ ಮಾಲ್ದಾರೆಯ ಗದ್ದಿಗೆಬೆಟ್ಟ ವ್ಯಾಪ್ತಿಯ ಅರಣ್ಯ ಪ್ರದೇಶದೊಳಗೂ ತೆರಳಿ ಪರಿಶೀಲಿಸಿದರು. ಇದೇ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ಅರಣ್ಯ ಪ್ರದೇಶದಲ್ಲಿ ಬೆಂಕಿಯಿಂದಾಗಿ ಆಗಿರುವ ನಷ್ಟಗಳ ಬಗ್ಗೆ ಪರಿಶೀಲಿಸಲು ಆಗಮಿಸಿದ್ದು ಈಗಾಗಲೇ ಈ ಬಗ್ಗೆ ಜಿಲ್ಲೆಯ ಅರಣ್ಯಾಧಿಕಾರಿಗಳಿಂದ ಮಾಹಿತಿಯನ್ನು ಪಡೆಯಲಾಗಿದೆ. ಕಾಡಾನೆಗಳ ಹಾವಳಿಯಿಂದಾಗಿ ಜನಸಾಮಾನ್ಯರು ಹಾಗೂ ಬೆಳೆಗಾರರಿಗೆ ಆಗುತ್ತಿರುವ ಸಮಸ್ಯೆಗಳು ಪ್ರಾಣ ಹಾನಿ ಗಮನಕ್ಕೆ ಬಂದಿದ್ದು ಈ ಬಗ್ಗೆ ಕೂಡಲೇ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ವರದಿಯನ್ನು ನೀಡಲಾಗುವದೆಂದರು.

ಹೆಚ್ಚಿನ ಆನೆಗಳನ್ನು ಹಿಡಿಯಲು ಸರ್ಕಾರದ ಅನುಮತಿ ಅಗತ್ಯವೆಂದರು. ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ ಯೋಜನೆ ರೂಪಿಸಿದ್ದು ರೈಲ್ವೆ ಕಂಬಿಗಳನ್ನು ಬಳಸಿ ಕಾಡಾನೆಗಳನ್ನು ನಿಯಂತ್ರಿಸಲು ಸಿದ್ದತೆ ನಡೆಯುತ್ತಿದ್ದು ಸರ್ಕಾರದಿಂದ ಅನುದಾನ ಬಿಡುಗಡೆ ಆದ ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವ ದೆಂದರು. ಅರಣ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇಲಾಖೆಯು ಆಸಕ್ತಿವಹಿಸಿದ್ದು ಅರಣ್ಯದಲ್ಲಿ ನೀರಿನ ವ್ಯವಸ್ಥೆ ಮಾಡುವ ಮೂಲಕ ಗಿಡಗಳನ್ನು ನೆಟ್ಟು ಬೆಳೆಸಲಾಗುವದೆಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್, ಮಡಿಕೇರಿ ಡಿ.ಸಿ.ಎಫ್. ಮಂಜುನಾಥ್, ಎ.ಸಿ.ಎಫ್. ಎಂ.ಎಸ್. ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿ ಅಶೋಕ್, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ರಂಜನ್, ಇತರರು ಹಾಜರಿದ್ದರು.

ಕಾಫಿ ತೋಟಗಳಲ್ಲಿ ಬೀಡುಬಿಟ್ಟಿ ರುವ ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡುವಂತೆ ಕಾಫಿ ಬೆಳೆಗಾರರು ರಾಜ್ಯ ಅಪರ ಪ್ರಧಾನ ಮುಖ್ಯ ಅರಣ್ಯ

(ಮೊದಲ ಪುಟದಿಂದ) ಸಂರಕ್ಷಣಾಧಿಕಾರಿ ಶಿವರಾಜ್‍ಸಿಂಗ್ ಅವರನ್ನು ಒತ್ತಾಯಿಸಿದ ಘಟನೆ ಇಂದು ನಡೆಯಿತು. ದುಬಾರೆ ಹಾಗೂ ಮಾಲ್ದಾರೆಗೆ ಭೇಟಿ ನೀಡಿದ ಸಂದರ್ಭ ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಸಂಚಾಲಕರಾದ ಮಂಡೇಪಂಡ ಪ್ರವೀಣ್ ಬೋಪಣ್ಣ ನೇತೃತ್ವದಲ್ಲಿ ಬೆಳೆಗಾರರು ಮಾಲ್ದಾರೆಯಲ್ಲಿ ರಾಜ್ಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್‍ಸಿಂಗ್ ರವರನ್ನು ಭೇಟಿ ಮಾಡಿ ಕಾಡಾನೆಗಳು ಅರಣ್ಯ ಬಿಟ್ಟು ನಾಡಿಗೆ ಲಗ್ಗೆ ಇಟ್ಟು ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿದ್ದು ಬೆಳೆಗಾರರನ್ನು ಹಾಗೂ ಕಾರ್ಮಿಕರನ್ನು ಬಲಿ ಪಡೆಯುತ್ತಿದೆ. ಅಲ್ಲದೇ ತೋಟದಲ್ಲಿ ಕೃಷಿ ಫಸಲುಗಳು ನಷ್ಟವಾಗುತ್ತಿದೆ. ಅಲ್ಲದೇ ಭತ್ತದ ಕೃಷಿ ಕೂಡ ಮಾಡಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಡಾನೆಗಳ ಸಂಖ್ಯೆ ಮಿತಿಮೀರಿದ್ದು ಕೂಡಲೇ ಕಾಡಾನೆಗಳಿಗೆ ಸಂತಾನಹರಣ ಮಾಡಬೇಕೆಂದು ಒತ್ತಾಯಿಸಿದರು. ಅಲ್ಲದೇ ಜಿಲ್ಲೆಯಲ್ಲಿ ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಮುಖ್ಯ ಅಧಿಕಾರಿಗಳ ಸಭೆಯನ್ನು ನಡೆಸುವಂತೆ ಒತ್ತಾಯಿಸಿದರು. ತಾ.16ರಂದು ಮಡಿಕೇರಿಯ ಅರಣ್ಯ ಭವನದಲ್ಲಿ ಹಮ್ಮಿಕೊಂಡಿರುವ ಸಭೆಗೆ ರಾಜ್ಯದ ಉನ್ನತ್ತ ಮಟ್ಟದ ಅಧಿಕಾರಿಗಳು ಬರುವಂತೆ ಒತ್ತಾಯಿಸಿದರು. ಇತ್ತೀಚೆಗೆ ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ವತಿಯಿಂದ ಮಡಿಕೇರಿಯ ಅರಣ್ಯ ಭವನದ ಎದುರು ಹೋರಾಟ ನಡೆಸಿದ ಸಂದರ್ಭ ಸಮಿತಿ ವತಿಯಿಂದ ನೀಡಲಾದ ಬೇಡಿಕೆಯ ಮನವಿ ಪತ್ರದಲ್ಲಿರುವ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಕಾಫಿ ತೋಟಕ್ಕೆ ಖುದ್ದು ಭೇಟಿ

ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಪದಾಧಿಕಾರಿಗಳಿಂದ ಸಮಸ್ಯೆಯನ್ನು ಆಲಿಸಿದ ಅಧಿಕಾರಿ ಶಿವರಾಜ್‍ಸಿಂಗ್ ಸಿದ್ದಾಪುರ ಸಮೀಪದ ಇಂಜಿಲಗೆರೆ ಮಂಡೇಪಂಡ ಪ್ರವೀಣ್ ದೇವಯ್ಯ ಅವರ ಕಾಫಿ ತೋಟಕ್ಕೆ ಭೇಟಿ ನೀಡಿ ತೋಟದೊಳಗೆ ಕಾಡಾನೆಗಳು ಬೆಳೆ ನಷ್ಟಪಡಿಸಿರುವದನ್ನು ಕಣ್ಣಾರೇ ಕಂಡು ವಿಷಾದ ವ್ಯಕ್ತಪಡಿಸಿದರು. ನಂತರ ಬೆಳೆಗಾರರೊಂದಿಗೆ ಮಾತನಾಡಿ ಇಲ್ಲಿನ ಸಮಸ್ಯೆಗಳು ತನಗೆ ಅರ್ಥವಾಗಿದ್ದು ತಾನು ಈ ಬಗ್ಗೆ ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದರು. ಜಿಲ್ಲೆಯ ಜನತೆ ಶಾಂತಿ ಪ್ರಿಯರು ಹಾಗೂ ಧೈರ್ಯಶಾಲಿಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭ ಬೆಳೆಗಾರರು ಆನೆ ಹಾವಳಿಯನ್ನು ನಿಯಂತ್ರಿಸಲು ಶಾಶ್ವತ ಯೋಜನೆಯನ್ನು ರೂಪಿಸಲು ಸರ್ಕಾರಕ್ಕೆ ಒತ್ತಡ ತರುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಪ್ರವೀಣ್ ಬೋಪಣ್ಣ, ಕೊಂಗೇರ ಗಪ್ಪಣ್ಣ, ಮಂಡೇಪಂಡ ಅರ್ಜುನ್ ತಿಮ್ಮಯ್ಯ, ಪಾಂಡಂಡ ರಾಜಗಣಪತಿ, ಕೊಂಗೇರ ಬೋಪಯ್ಯ, ಕಂಡ್ರತಂಡ ರಾಯ್, ಎಂ.ಜಿ. ದೇವಯ್ಯ, ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್, ಮಡಿಕೇರಿ ಡಿ.ಸಿ.ಎಫ್. ಮಂಜುನಾಥ್, ಎ.ಸಿ.ಎಫ್. ಎಂ.ಎಸ್. ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿ ಅಶೋಕ್, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ರಂಜನ್, ಇತರರು ಸಭೆಯಲ್ಲಿ ಹಾಜರಿದ್ದರು. - ವಾಸು