ಕುಶಾಲನಗರ: ಮೀಸಲು ಅರಣ್ಯಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಡ್ರೋಣ್ ಕ್ಯಾಮೆರಾಗಳನ್ನು ಬಳಸಿ ಶೀಘ್ರ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಚಿಂತನೆ ಹರಿಸಿದೆ ಎಂದು ರಾಜ್ಯ ಅರಣ್ಯ ಇಲಾಖೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಸಿಂಗ್ ತಿಳಿಸಿದ್ದಾರೆ.

ಅವರು ಕೊಡಗು ಮತ್ತು ಮೈಸೂರು ಜಿಲ್ಲೆ ಗಡಿಭಾಗಗಳಲ್ಲಿ ಬೆಂಕಿ ಅನಾಹುತಕ್ಕೆ ಒಳಗಾದ ಮೀಸಲು ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಕೊಪ್ಪ ಬಳಿ ಶಕ್ತಿಯೊಂದಿಗೆ ಮಾತನಾಡಿ, ಜಿಲ್ಲೆಯ ದುಬಾರೆ, ಆನೆಕಾಡು, ಮಾಲ್ದಾರೆ, ಮೈಸೂರು ಜಿಲ್ಲೆಯ ದೊಡ್ಡಹರವೆ ವ್ಯಾಪ್ತಿಯಲ್ಲಿ ಬೆಂಕಿಗೆ ಆಹುತಿಯಾದ ಅರಣ್ಯ ಪ್ರದೇಶವನ್ನು ವೀಕ್ಷಣೆ ಮಾಡಲಾಗಿದೆ. ಬೆಂಕಿ ಅನಾಹುತಕ್ಕೆ ಕಾರಣ ಕಂಡುಹಿಡಿಯಲು ಇಲಾಖೆ ವಿಶೇಷ ತನಿಖಾ ತಂಡವೊಂದನ್ನು ರಚಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ಎಚ್ಚರವಹಿಸಲು ಅರಣ್ಯ ಪ್ರದೇಶದಲ್ಲಿ ವಿಚಕ್ಷಣಾ ದಳಗಳನ್ನು ರಚಿಸುವದರೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುವದು. ಬೆಂಕಿ ಅನಾಹುತ ಕಂಡ ತಕ್ಷಣ ಹತೋಟಿಗೆ ತರುವ ಸಂಬಂಧ ಆಧುನಿಕ ಸೌಲಭ್ಯಗಳನ್ನು ಇಲಾಖೆ ಕಲ್ಪಿಸಲಿದೆ ಎಂದಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಉಂಟಾಗಿರುವ ಅಗ್ನಿ ಅನಾಹುತದ ಬಗ್ಗೆ ಸಮಗ್ರ ವರದಿಯನ್ನು ರಾಜ್ಯ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸ ಲಾಗುವದು ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಂಡುಬಂದಿರುವ ಆನೆ ಮಾನವ ಸಂಘರ್ಷ ಹಾಗೂ ಹುಲಿ ಧಾಳಿ ಪ್ರಕರಣಗಳಿಗೆ ಶಾಶ್ವತ ಕಡಿವಾಣ ಹಾಕಲು ಇಲಾಖೆ ಯೋಜನೆ ರೂಪಿಸುತ್ತಿದೆ. ಅರಣ್ಯದ ಒಳಭಾಗಗಳಲ್ಲಿ ವನ್ಯಜೀವಿಗಳಿಗೆ ಅವಶ್ಯವಿರುವ ನೀರಿನ ವ್ಯವಸ್ಥೆ ಹಾಗೂ ಆಹಾರ ಉತ್ಪನ್ನಗಳ ಸೌಲಭ್ಯ ಕಲ್ಪಿಸಲು ಇಲಾಖೆಯ ಹಿರಿಯ ಅಧಿಕಾರಿಗಳೊಡನೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ಅರಣ್ಯ ಮತ್ತು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಇಲಾಖೆಯೊಂದಿಗೆ ನಾಗರಿಕರ ಸಹಕಾರ ಅವಶ್ಯವಾಗಿದೆ ಎಂದು ಶಿವರಾಜ್ ಸಿಂಗ್ ಹೇಳಿದರು.

-ಸಿಂಚು