ಸೋಮವಾರಪೇಟೆ, ಮಾ. 10: ತಾಲೂಕಿನ ಯಲಕನೂರು-ಹೊಸಳ್ಳಿ-ಕಾಟಿಕೊಪ್ಪಲು ಗ್ರಾಮದಲ್ಲಿ ನೂತನ ವಾಗಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ನಂತರ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿಗಳು, ವಿಜ್ಞಾನದಿಂದ ಸಮಾಜ ಅಭಿವೃದ್ಧಿ ಹೊಂದಿದರೆ ಆಧ್ಯಾತ್ಮದಿಂದ ಸಂಸ್ಕಾರ ಪಡೆಯಬಹುದು ಎಂದರು.

ಧಾರ್ಮಿಕ ತಳಹದಿಯ ಮೇಲೆ ರೂಪುಗೊಂಡಿರುವ ದೇಶದಲ್ಲಿ ಆಧ್ಯಾತ್ಮಿಕತೆಯಿಂದ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದ ಅವರು, ದೇವಾಲಯಗಳಿಂದ ಜನತೆ ಒಂದೆಡೆ ಸೇರಬಹುದು. ಆ ಮೂಲಕ ಪರಸ್ಪರ ಬಾಂಧವ್ಯ ಬೆಸೆಯುವ ಕಾರ್ಯವಾಗುತ್ತದೆ ಎಂದರು.

ತೊರೆನೂರು ವಿರಕ್ತ ಮಠಾಧೀಶ ಮಲ್ಲೇಶ ಸ್ವಾಮೀಜಿ ಮಾತನಾಡಿ, ಆಧುನಿಕತೆ ಬೆಳೆದಂತೆ ಜನತೆ ಆಧ್ಯಾತ್ಮದತ್ತ ವಾಲುತ್ತಿದ್ದಾರೆ. ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ನೆಲೆಸಲು ದೇವಾಲಯಗಳು ಅಗತ್ಯವೆಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಆಧ್ಯಾತ್ಮದಿಂದ ಸದ್ಭಾವನೆ ಮೂಡುತ್ತದೆ ಎಂದರು. ಜಿ.ಪಂ. ಸದಸ್ಯೆ ಪೂರ್ಣಿಮ ಗೋಪಾಲ್, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಮಾತನಾಡಿದರು.

ನೇರುಗಳಲೆ ಗ್ರಾ.ಪಂ. ಸದಸ್ಯರಾದ ವಿನೋದ್ ಕುಮಾರ್ ಹಾಗೂ ಲಕ್ಷ್ಮಮ್ಮ, ಉದ್ಯಮಿಗಳಾದ ಮುತ್ತಣ್ಣ, ಜಗದೀಶ್ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಕುಮಾರ್ ವಹಿಸಿದ್ದರು. ಗ್ರಾಮದ ಬಾಲೆ ಮಾನ್ಯ ನೂತನ ದೇವಾಲಯ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಶಿಕ್ಷಕ ಬಸವರಾಜ್, ವೇದಮೂರ್ತಿ ಸೇರಿದಂತೆ ಇತರರು ಧಾರ್ಮಿಕ ಕಾರ್ಯಕ್ರಮವನ್ನು ನಿರ್ವಹಿಸಿದರು.